ಹಂಪಿ ಉತ್ಸವ,ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಣೆಗೆ ನಿರ್ಧಾರ…

0
470

ಬಳ್ಳಾರಿ/ಬಳ್ಳಾರಿ:ಕಳೆದ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಹಂಪಿ ಉತ್ಸವ-2017 ನವೆಂಬರ್ 3,4 ಮತ್ತು 5ರಂದು ಮೂರು ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿದೆ.

ಹಂಪಿ ಉತ್ಸವ-2017ಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು, ಸಾಹಿತಿಗಳು ಮತ್ತು ಕಲಾವಿದರು ಹಾಗೂ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಾರ್ಮಿಕ,ಕೌಶಲ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕಳೆದ ಬಾರಿ ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಿಸಿರುವುದಕ್ಕೆ ಮತ್ತು ವಿಶೇಷವಾಗಿ ಸ್ಥಳೀಯ ಕಲಾತಂಡಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕೆ, ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ರೈತರ ವಿಚಾರ ಸಂಕಿರಣ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಂಡಿರುವುದಕ್ಕೆ ಅನೇಕ ಸಾಹಿತಿಗಳು,ಕಲಾವಿದರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ, ಈ ವರ್ಷವೂ ಅದೇ ರೀತಿ ವಿಜೃಂಭಣೆಯಿಂದ ಉತ್ಸವ ಮಾಡುವಂತೆ ಅವರು ಮನವಿ ಮಾಡಿದರು.

*ಸ್ಥಳೀಯ 152 ಕ್ಕೂ ಹೆಚ್ಚು ತಂಡಗಳಿಗೆ ಅವಕಾಶ*

ಕಳೆದ ಬಾರಿ 152 ಸ್ಥಳೀಯ ಕಲಾತಂಡಗಳಿಗೆ ಹಂಪಿ ಉತ್ಸವದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಈ ಬಾರಿಯೂ ಅದೇ ರೀತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಕಲಾತಂಡಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಹಿರಿಯ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ ಮತ್ತು ವಿ.ಟಿ.ಕಾಳೆ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಕಳೆದ ಬಾರಿ ಹಂಪಿ ಉತ್ಸವವನ್ನು ಜನಪರ ಉತ್ಸವವನ್ನಾಗಿ ಆಚರಿಸಿರುವುದಕ್ಕೆ ಅಭಿನಂದಿಸಿದರು. ಉತ್ತರ ಕರ್ನಾಟಕದ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಈ ಬಾರಿಯೂ ಕಳೆದ ವರ್ಷದಂತೆ ಜನಪರ ಉತ್ಸವವನ್ನಾಗಿ ಆಚರಿಸುವ ಹಾಗೂ ಸಾರ್ವಜನಿಕರು ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿಟ್ಟಿನಲ್ಲಿ ಏನೇನು ಅವಕಾಶಗಳಿವೆಯೋ ಅವುಗಳನ್ನೆಲ್ಲ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದರು.

*ಬಣ್ಣ ಹಚ್ಚಿಕೊಳ್ಳಲು ವ್ಯವಸ್ಥೆ ಕಲ್ಪಿಸಿ*

ಹಿರಿಯ ಕಲಾವಿದೆ ಜೋಗತಿ ಮಂಜಮ್ಮ ಅವರು ಎಲ್ಲ ಕಲಾವಿದರಿಗೂ ಸಮಾನವಾದ ಸಂಭಾವನೆ ನೀಡಬೇಕು ಮತ್ತು ಕಲಾವಿದರಿಗೆ ವೇದಿಕೆ ಮೇಲೆ ಕಾರ್ಯಕ್ರಮ ನೀಡುವುದಕ್ಕಾಗಿ ಬಣ್ಣ ಹಚ್ಚಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೇಳಿದರು.

*ಮುಖ್ಯ ವೇದಿಕೆಯಲ್ಲಿ‌ ಕವಿಗೋಷ್ಠಿ*

ಕನ್ನಡ ವಿವಿ ರಿಜಿಸ್ಟ್ರಾರ್ ಡಾ.ಪಾಂಡುರಂಗಬಾಬು ಮತ್ತು ಮೋಹನ್ ಕುಂಟಾರ್ ಮಾತನಾಡಿ, ಈ ಬಾರಿ ಮುಖ್ಯವೇದಿಕೆಯಲ್ಲಿಯೇ ಕವಿಗೋಷ್ಠಿ ನಡೆಸಬೇಕು ಮತ್ತು ಹಂಪಿ ಉತ್ಸವಕ್ಕೆ ಸಂಬಂಧಿಸಿದಂತೆ ಪುಸ್ತಕ ಪ್ರಕಟಿಸುವುದಕ್ಕೆ ಅವಕಾಶ ನೀಡುವುದರ ಜತೆಗೆ ಅನುದಾನ ಒದಗಿಸಬೇಕು ಎಂದು ಹೇಳಿದರು.

*ತಂಡಗಳ ಆಯ್ಕೆ ಪಾರದರ್ಶಕವಾಗಿರಲಿ*

ಕಲಾ ತಂಡಗಳು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಲ ಲೋಪದೋಷಗಳು ಕಳೆದ ಬಾರಿಯ ಉತ್ಸವದಲ್ಲಿ ಉಂಟಾಗಿದ್ದು, ಈ ವರ್ಷ ಆ ರೀತಿ ಆಗದಂತೆ ನೋಡಿಕೊಳ್ಳಬೇಕು ಮತ್ತು ಆಯ್ಕೆ ಪಾರದರ್ಶಕವಾಗಿರಬೇಕು ಎಂದು ಕಲಾವಿದ ಚಂದ್ರಶೇಖರ ಅವರು ಒತ್ತಾಯಿಸಿದರು.
ಮೂರನೇ ವ್ಯಕ್ತಿಗಳ ಕೈಚಳಕದ ಪರಿಣಾಮ ಗುಣಮಟ್ಟದ ನಾಟಕಗಳನ್ನು ಗಾಳಿಗೆ ತೂರಿ ಕಳೆದ ಬಾರಿ ಕಳಪೆ ನಾಟಕಗಳು ಕೂಡ ಸ್ಥಾನ ಪಡೆದವು ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ವರ್ಷ ಆ ರೀತಿ ಆಗದಿರಲಿ ಎಂದರು.

*ಶಿಲ್ಪ ಶಿಬಿರ ನಡೆಸಿ*

ಶಿಲ್ಪಿಗಳಿಲ್ಲದೇ ಹಂಪಿ ನಿರ್ಮಾಣವಾಗಿಲ್ಲ; ಈ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಶಿಲ್ಪಶಿಬಿರ ನಡೆಸಬೇಕು ಮತ್ತು ಈ ಶಿಬಿರಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಹಡಗಲಿಯ ಹಂಸಾನಂದ ಚಾರ್ಯ ಅವರು ಹೇಳಿದರು.

 

*ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗ್ಲಿ*

ಕಳೆದ ಬಾರಿ ಜಿಲ್ಲೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉತ್ಸವದ ವಿಚಾರ ಸಂಕಿರಣದಲ್ಲಿ ಕಿಂಚಿತ್ತು ಚರ್ಚೆ ನಡೆಯಲಿಲ್ಲ ಎಂಬ ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಮಾತಿಗಿಳಿದ ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ಅವರು, ನೀರಿನ ಕೊರತೆ ಹಿನ್ನೆಲೆ ಮತ್ತು ಪರ್ಯಾಯ ಬೆಳೆ ಬೆಳೆಯುವುದರ ಬಗ್ಗೆ, ಜಾಗತೀಕ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಯಶಸ್ವಿ ರೈತರ ಜೀವನಗಾಥೆಗಳ ಕುರಿತು ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.
ಅವಶ್ಯವಿದ್ದರೇ ಯಶಸ್ವಿ ರೈತರ ಪಟ್ಟಿ ತಾವು ನೀಡವುದಾಗಿ ಸಭೆಗೆ ತಿಳಿಸಿದರು.

*ಧ್ವನಿ ಮತ್ತು ಬೆಳಕು*

ಕಳೆದ ಬಾರಿಯಂತೆ ಈ ಬಾರಿಯೂ ಧ್ವನಿ ಮತ್ತು ಬೆಳಕು ಆಯೋಜಿಸಲಾಗುತ್ತಿದ್ದು, ವಿಜಯನಗರ ವೈಭವ ಮತ್ತು ಕರ್ನಾಟಕ ವೈಭವ ಎರಡರಲ್ಲಿ ಒಂದನ್ನು ತಮ್ಮ ಅಭಿಪ್ರಾಯಗಳನ್ನು ಆಲಿಸಿ ಅಂತಿಮಗೊಳಿಸಲಾಗುವುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

 

ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಮಾತನಾಡಿ, ಕಳೆದ ವರ್ಷ ಹಂಪಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಈ ಬಾರಿಯೂ ಅದೇ ರೀತಿ ಜರುಗಲಿ, ಅದಕ್ಕೆ ಬೇಕಾದ ಅಗತ್ಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

*ಕಳೆದ ವರ್ಷ 8.50 ಕೋಟಿ ಖರ್ಚಾಗಿದೆ*

ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ,ಕಳೆದ ವರ್ಷ ಹಂಪಿ ಉತ್ಸವವನ್ನು ನವೆಂಬರ್ 3,4 ಮತ್ತು 5ರಂದು ಆಚರಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 3 ಕೋಟಿ ರೂ. ನೀಡಿತ್ತು. ಮುಂಚೆ 1ಕೋಟಿ ರೂ.ಹಣವಿತ್ತು. ಪ್ರವಾಸೋದ್ಯಮ ಇಲಾಖೆ-2 ಕೋಟಿ ರೂ.,ವಿವಿಧ ಸಂಘ-ಸಂಸ್ಥೆಗಳ ಮತ್ತು ಫಲಾನುಭವಿಗಳಿಂದ 3 ಕೋಟಿ ರೂ. ಬಂದಿತ್ತು. 8.50ಕೋಟಿ ರೂ. ಖರ್ಚು ಮಾಡಲಾಗಿತ್ತು ಎಂದು ವಿವರಿಸಿದರು.

ಸಭೆಯಲ್ಲಿ ಶಾಸಕರಾದ ಈ.ತುಕರಾಂ,ಭೀಮಾನಾಯ್ಕ, ಮೇಯರ್ ಜಿ.ವೆಂಕಟರಮಣ, ಅಪರ ಜಿಲ್ಲಾಧಿಕಾರಿ ಸೋಮಶೇಖರ, ಅಪರ ಪೊಲೀಸ್ ವರಿಷ್ಠಾಧಿಕಾರಿ ಝಂಡೇಕರ್, ಸಹಾಯಕ ಆಯುಕ್ತ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here