ಹಿಂದುಳಿದ ವರ್ಗಗಳ ಪ್ರತಿಭಟನೆ

0
170

ಬಳ್ಳಾರಿ/ಹೊಸಪೇಟೆ:ವಿವಿಧ ಬೇಡಿಕೆಗಳಿಗಾಗಿ ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಡಿ.ದೇವರಾಜ್ ಅರಸ್ ಸಾಮಾಜಿಕ, ಶೈಕ್ಷಣಿಕ, ಸೇವಾ ಟ್ರಸ್ಟ್ ಪದಾಧಿಕಾರಿಗಳು, ತಹಶೀಲ್ದಾರರ ಕಛೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಯುವ ಜನರ ಆರ್ಥಿಕ ಸಬಲೀಕರಣಕ್ಕಾಗಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಸ್ವ-ಸಹಾಯ ಗುಂಪುಗಳ ಸಾಲ ಯೋಜನೆಯನ್ನು ಹೊಸಪೇಟೆ ಮತ್ತು ಬಳ್ಳಾರಿ ತಾಲೂಕುಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, 2 ದಶಕಗಳ ಹಿಂದೆ ಡಾ. ನಂಜುಂಡಪ್ಪ ಆಯೋಗದ ವರದಿಯ ಪ್ರಕಾರ ಹೊಸಪೇಟೆ ಮತ್ತು ಬಳ್ಳಾರಿ ತಾಲೂಕುಗಳು ಮುಂದುವರಿದ ತಾಲೂಕುಗಳೆಂದು ಪರಿಗಣಿಸಿರುವುದರಿಂದ ಈ ತಾಲೂಕುಗಳಿಗೆ  ಆ ಸೌಲಭ್ಯವನ್ನು ನೀಡಲಾಗುತ್ತಿಲ್ಲ ಇದರಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ.  ಜಿಲ್ಲೆಯ ಅರ್ಧಕ್ಕಿಂತಲೂ ಹೆಚ್ಚು ಜನಸಾಂದ್ರತೆ ಈ 2 ತಾಲೂಕುಗಳಲ್ಲಿ ಕೇಂದ್ರೀಕೃತವಾಗಿದ್ದು ನಿರುದ್ಯೋಗ ಮತ್ತು ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವ ಪ್ರಮಾಣ ಈ ಭಾಗದಲ್ಲಿ ಅಧಿಕವಾಗಿದೆ ಎಂಬುದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಅಭಿವೃದ್ದಿ ಅಧ್ಯಯನ ವಿಭಾಗವು  ಸಮೀಕ್ಷೆಯಲ್ಲಿ ತಿಳಿಸಿದ್ದು, ಕಳೆದ 2-3 ವರ್ಷಗಳಿಂದ ಈ ತಾಲೂಕುಗಳಲ್ಲಿ ಹಲವು ಕಬ್ಬಿಣ, ಉಕ್ಕು, ಘಟಕಗಳು, ಗಣಿಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದು ಸಾವಿರಾರು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅಲ್ಲದೇ ತುಂಗಭದ್ರ ಜಲಾಶಯದಲ್ಲಿ ನೀರಿನ ಕೊರತೆಯಿಂದ ಜಮೀನಿಗೆ ನೀರಿಲ್ಲದೇ ರೈತರು ಅತೀವ ಸಂಕಷ್ಟದಲ್ಲಿದ್ದಾರೆ. 5 ತಾಲೂಕುಗಳ ಪರಿಸ್ಥಿತಿಗಿಂತ ಹೊಸಪೇಟೆ, ಬಳ್ಳಾರಿ ತಾಲೂಕುಗಳ ಸ್ಥಿತಿಗತಿ ಭಿನ್ನವಾಗಿಲ್ಲ. ಆದುದ್ದರಿಂದ ದೇವರಾಜ್ ಅರಸ್ ಅಭಿವೃದ್ದಿ ನಿಗಮವು ಡಾ. ನಂಜುಂಡಪ್ಪ ಸಮಿತಿಯ ವರದಿಯನ್ನು ಆಧಾರವಾಗಿಟ್ಟುಕೊಳ್ಳದೆ ವರ್ತಮಾನದ ನಿಜಾಂಶಗಳನ್ನು ಮಾನದಂಡವಾಗಿಟ್ಟುಕೊಂಡು ಈ ಎರಡು ತಾಲೂಕುಗಳಿಗೆ ಯುವಶಕ್ತಿ ಸ್ವ-ಸಹಾಯ ಗುಂಪುಗಳ ಸಾಲ ಯೋಜನೆ ಸೌಲಭ್ಯ ವಿಸ್ತರಿಸಬೇಕೆಂದು ಆಗ್ರಹಿಸಿದರು
ಒಕ್ಕೂಟದ ತಾಲೂಕು ಘಟಕದ ಅಧ್ಯಕ್ಷ ರವಿಶಂಕರ್ ದೇವರಮನಿ ಮಾತನಾಡಿ, ರಾಜ್ಯ ಸರ್ಕಾರವು ಹಲವು ವರ್ಷಗಳಿಂದ ದೇವರಾಜ್ ಅರಸ್ ಅಭಿವೃದ್ದಿ ನಿಗಮದ ಮೂಲಕ ಕುರಿಸಾಕಾಣಿಕೆಗೆ ನೀಡಲಾಗುತ್ತಿದ್ದ ಒಂದುಲಕ್ಷ ರೂಪಾಯಿ ಸಬ್ಸಿಡಿ ಸಾಲಯೋಜನೆಯನ್ನು ಈ ವರ್ಷದಿಂದ ಸ್ಥಗಿತಗೊಳಿಸಿರುವುದು ಅತ್ಯಂತ ಖಂಡನೀಯ. ಆದುದರಿಂದ ಕುರಿಸಾಕಾಣಿಕೆಗೆ ಈ ಹಿಂದೆ ನೀಡಲಾಗುತ್ತಿದ್ದ. ಒಂದುಲಕ್ಷ ರೂಪಾಯಿ ಸಾಲ ಯೋಜನೆ ಪುನರಾರಂಭಿಸಬೇಕು. ಹಾಗೂ ಹಿಂದುಳಿದ ವರ್ಗಗಳ ಮಹಿಳಾ ಸ್ವ-ಸಹಾಯಗುಂಪುಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎರಡು ಲಕ್ಷ ರೂಪಾಯಿ ಸಬ್ಸಿಡಿ ಸಾಲ ಯೋಜನೆ ನೀಡಲಾಗುತ್ತಿದೆ. ಅದ್ದರಿಂದ ಈ ಸಾಲ ಯೋಜನೆಯ ಮೊತ್ತವನ್ನು ಐದು ಲಕ್ಷ ಕ್ಕೆ ಹೆಚ್ಚಿಸಬೇಕು ಎಂದರು.

ರೂಪೇಶ್ ಕುಮಾರ್, ಬೋಡಾ ರಾಮಪ್ಪ, ಶಿವಾನಂದ, ಗೌಳಿ ರುದ್ರಪ್ಪ, ಸೋಮಣ್ಣ ಯಾದವ್, ರವಿಕುಮಾರ್, ಜೆ.ಎನ್.ಕಾಳಿದಾಸ, ವೀರಭದ್ರಪ್ಪ ಆಚಾರ್, ಗೌಡಪ್ಪಣ್ಣನವರ್, ಈಡಿಗರ ಕುಮಾರಸ್ವಾಮಿ, ರಾಮಚಂದ್ರಪ್ಪ, ಗೋಪಾಲರಾವ್, ರಘುನಾಥ್, ಎ.ಮರಿಯಪ್ಪ, ಶಂಕ್ರಾಚಾರ್, ಚಿದಾನಂದ, ಕಂಪ್ಲಿ ನಾಗರಾಜ್, ಶೇಖರ್ ಬುಕ್ಕಸಾಗರ, ಎನ್.ಟಿ.ರಾಜು, ಭೋಜರಾಜು, ಉಪ್ಪಾರ್ ನೀಲಕಂಠ, ಅಂಜಿನಿಗೌಡ, ಗೋವಿಂದಪೂಜಾರ್, ಹಾಗೂ ಜಿ.ಮಾಧವಿ, ಶಾರದಾ ಯಾದವ್, ಸುಶೀಲಮ್ಮ, ಜಿ.ಪದ್ಮಾವತಿ, ಲಕ್ಷ್ಮೀದೇವಿ, ಜಿ.ನರಸಮ್ಮ, ಸುಲೋಚನ, ಜಿ.ಗಾಯಿತ್ರಿ, ಜಿ.ರೇಣುಕಾ ಸೇರಿದತೆ ಇತರರು⁠⁠⁠⁠

LEAVE A REPLY

Please enter your comment!
Please enter your name here