ಹೆಣ್ಣು ಮಕ್ಕಳು ವಿದ್ಯಾವಂತರಾಗಲು ಶಾಸಕರ ಕರೆ..

0
202

ಚಾಮರಾಜನಗರ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬ ಹೆಣ್ಣು ಮಗವೂ ಸಹ ಸರ್ಕಾರದಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಬೇಕೆಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಕರೆ ನೀಡಿದರು.

ಅವರು ತಾಲ್ಲೂಕಿನ ರಂಗಸಂದ್ರ (ಬೂದಿಪಡಗ) ಗ್ರಾಮದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಬೆಂಗಳೂರು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸಂಕೀರ್ಣ ಕಟ್ಟಡ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಅದರಲ್ಲೂ ಹೆಣ್ಣು ಮಕ್ಕ ಶ್ರೋಯೋಭಿವೃದ್ದಿಗೆ ನಮ್ಮ ತಾಲ್ಲೂಕಿನ ಇಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣಕ್ಕೆ ಅನುದಾನ ನೀಡಿದ್ದು ಮುಖ್ಯಮಂತ್ರಿಯವರು ಜಿಲ್ಲೆಯ ಅಭಿವೃದ್ದಿಗೆ ಹೆಚ್ಚು ಕಾಳಜಿ ಹೊಂದಿದ್ದಾರೆಂದು ತಿಳಿಸಿದರು.ಶೈಕ್ಷಣಿಕ ಅಗತ್ಯತೆಗೆ ಪೂರಕವಾಗಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಶಾಲಾ ಬೋಧಾನಾ ಕೊಠಡಿಗಳು, ವಸತಿ, ಬೋಧಕ-ಭೋಧಕೇತರ ಕೊಠಡಿ, ಗ್ರಂಥಾಲಯ, ಶೌಚಾಲಯ, ಪ್ರಯೋಗಾಲಯ ಸೇರಿದಂತೆ ವಸತಿ ಶಾಲೆಗೆ ಪೂರಕವಾಗಿ ಬೇಕಾದ ರಸ್ತೆ, ಚರಂಡಿ, ವಿದ್ಯುತ್,ಕುಡಿಯುವ ನೀರು ಒಳಗೊಂಡಂತೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಈ ವಸತಿ ಶಾಲೆಯಲ್ಲಿ 6ರಿಂದ 10 ತರಗತಿಯವರೆಗೆ ಬಡ, ದುರ್ಬಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಂಡು ಹೆಣ್ಣು ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಿ ಈ ಮೂಲಕ ಅವರನ್ನು ಉತ್ತಮ ಮಾನವ ಸಂಪನ್ಮೂಲಗಳನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.ಸುಸಜ್ಜಿತವಾಗಿ ವಸತಿ ಶಾಲಾ ಕಟ್ಟಡವನ್ನು ಗುಣಮಟ್ಟದಿಂದ ತ್ವರಿತವಾಗಿ ಯಾವುದೇ ಲೋಪವಾಗದಂತೆ ಕಾಮಗಾರಿ ಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಶಾಸಕರು ತಾಕೀತು ಮಾಡಿದರು.
ಜಿ,ಪಂ ಅಧ್ಯಕ್ಷ ಎಂ. ರಾಮಚಂದ್ರು ಮಾತನಾಡಿ ವಿದ್ಯೆ ಯಾರು ಕದಿಯಲಾರದು ಆಸ್ತಿಯಾಗಿದ್ದು ಪೋಷಕರು ತಮ್ಮ ಮಕ್ಕಳನ್ನೇ ಆಸ್ತಿ ಮಾಡಿ ಅವರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಕೊಡಿಸುವ ಮೂಲಕ ಶಿಕ್ಷಣದ ಉದ್ದೇಶ ಸಫಲವಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಬಿಕೆ ರವಿಕುಮಾರ್, ತಾ.ಪಂ ಸದಸ್ಯ ಕುಮಾರನಾಯ್ಕ, ಗ್ರಾ.ಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಶಿವನಾಯ್ಕ, ಮಾಜಿ ಅಧ್ಯಕ್ಷ ಶಾಮೀರ್ ಪಾಷಾ, ಮುಖಂಡರಾದ ಜಡೆಯಪ್ಪ, ಗಣೇಶನಾಯ್ಕ, ಉಲ್ಲೇಶ್‍ನಾಯ್ಕ, ಪ್ರಾಂಶುಪಾಲ ಮಹದೇವಪ್ರಸಾದ್, ನಟರಾಜು, ಲಿಂಗರಾಜು ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here