ಹೊರಗುತ್ತಿಗೆ ಸೇವೆ ರದ್ದು ಮಾಡದಂತೆ ಪ್ರತಿಭಟನೆ.

0
107

ಚಿಕ್ಕಬಳ್ಳಾಪುರ/ ಗುಡಿಬಂಡೆ: ಸುಮಾರು ವರ್ಷಗಳಿಂದ ವಿದ್ಯಾರ್ಥಿ ಹಾಗೂ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಪ್ರಿನ್ಸಿಪಲ್ ಕಾರ್ಯದರ್ಶಿ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥ ಮೂಲಕ ತೆರಳಿ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಹಾಸ್ಟೆಲ್ ಮತ್ತು ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ರಘು ಮಾತನಾಡಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಹೊರಗುತ್ತಿಗೆ ಅಧಾರದಲ್ಲಿ ಸುಮಾರು 45 ಮಂದಿ ನೌಕರರು ಹತ್ತಾರು ವರ್ಷಗಳಿಂದ ಅಡುಗೆ, ಕಾವಲು, ಡಿಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ನ.೨೩ ರಂದು ಹಿಂದುಳಿದ ವರ್ಗಗಳ ಇಲಾಖೆಯ ಮುಖ್ಯ ಕಾರ್ಯದರ್ಶಿ ಹೊರಗುತ್ತಿಗೆ ನೌಕರರು 6 ತಿಂಗಳ ಕಾಲ ಕೆಲಸ ನಿರ್ವಹಿಸಿದ ನಂತರ ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಇದು ನೌಕರರ ಪಾಲಿಗೆ ಮರಣ ಶಾಸನವಾಗಿದೆ. ಇದರಿಂದ ನಾವೆಲ್ಲಾ ಕುಟುಂಬ ಪೋಷಣೆ ಮಾಡಲಾಗದೇ ಬೀದಿಗೆ ಬೀಳಬೇಕಾಗಿದೆ. ಆದ್ದರಿಂದ ಕಾರ್ಯದರ್ಶಿಗಳು ನೀಡಿದ ಆದೇಶವನ್ನು ಹಿಂಪಡೆಯಬೇಕೆಂದರು.
ನಂತರ ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ ಸುಮಾರು ವರ್ಷಗಳಿಂದ ಗುತ್ತಿಗೆ ರೂಪದಲ್ಲಿ ನೂರಾರು ನೌಕರರು ಕಡಿಮೆ ವೇತನಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಇಲಾಖೆ ನೇರ ನೇಮಕಾತಿ ಮೂಲಕ ನೌಕರರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಕೆಲಸ ಕಳೆದುಕೊಳ್ಳುವ ಬೀತಿಯಿಂದ ಕಳೆದ ಜೂ.27 ರಿಂದ ಬೆಂಗಳೂರಿನಲ್ಲಿ ಹಗಲು ರಾತ್ರಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ನಂತರ ಮುಖ್ಯಮಂತ್ರಿಗಳು ನೀಡಿದ ಆಶ್ವಾಸನೆ ಮೇರೆಗೆ ಧರಣಿಯನ್ನು ವಾಪಸ್ಸು ಪಡೆದುಕೊಂಡಿದ್ದರು. ಆದರೆ ಪ್ರಸ್ತುತ ಇಲಾಖೆಯು ನೀಡಿರುವ ಆದೇಶದಿಂದ ಮತ್ತೊಮ್ಮೆ ಕೆಲಸ ಕಳೆದುಕೊಳ್ಳುವ ಬೀತಿ ಎದುರಾಗಿದೆ. ಆದ್ದರಿಂದ ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಕೂಡಲೇ ಆದೇಶ ಪತ್ರ ವಾಪಸ್ಸು ಪಡೆಯದೇ ಇದ್ದಲ್ಲಿ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಈ ವೇಳೆ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಮಯ್ಯ ಅವರಿಗೆ ಮನವಿ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಹಳೇಗುಡಿಬಂಡೆ ಲಕ್ಷ್ಮೀನಾರಾಯಣ, ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಸಂಘದ ಕಾರ್ಯದರ್ಶಿ ತಬಸಮ, ಮುಖಂಡರಾದ ಜಯಲಕ್ಷ್ಮಿ, ಗಂಗಮ್ಮ, ಸುನೀತ, ಸಾವಿತ್ರಿ ಹಾಜರಿದ್ದರು.

ಬಾಲಾಜಿ, ಗುಡಿಬಂಡೆ..

LEAVE A REPLY

Please enter your comment!
Please enter your name here