ಜಲಾಶಯದ ಹೂಳೆತ್ತಲು ರೈತರು ಸಜ್ಜು

0
247

ಬಳ್ಳಾರಿ /ಹೊಸಪೇಟೆ: ಮಠಾಧೀಶರ ಧಾರ್ಮಿಕ ಪರಿಷತ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ರೈತರು, ಮೇ.18ರಂದು ತುಂಗಭದ್ರಾ ಜಲಾಶಯದ ಹೂಳೆತ್ತಲು ಮುಂದಾಗಲಿದ್ದಾರೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ ಸ್ವಾಮಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸೇರಿದಂತೆ ಆಂಧ್ರ ಹಾಗೂ ತೆಲಗಾಂಣ ರಾಜ್ಯಗಳ ಲಕ್ಷಾಂತರ ರೈತರ ಜಮೀನುಗಳಿಗೆ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದಲ್ಲಿ ತುಂಬಿರುವ 33 ಟಿಎಂಸಿಯಷ್ಟು ಹೂಳನ್ನು ಹೊರ ಸಾಗಿಸಲು ಪ್ರಯೋಗಿಕವಾಗಿ ಸಿದ್ದತೆ ಮಾಡಿಕೊಂಡಿದ್ದು, ಒಂದು ವಾರದಲ್ಲಿ 100 ಟ್ರ್ಯಾಕ್ಟರ್‌ಗಳ ಮೂಲಕ ಸುಮಾರು 0.50 ಟಿಎಂಸಿ ಹೂಳೆತ್ತಲು ನಿರ್ಧಾರಿಸಲಿದೆ.

ಮೊದಲ ಹಂತದಲ್ಲಿ ವ್ಯಾಸನಕೇರಿ ವೆಂಕಟಾಪುರ, ಲೋಕಪ್ಪನ ಹೊಲ, ಹನುಮನಹಳ್ಳಿ ಹಾಗೂ ಅಯ್ಯನಹಳ್ಳಿ ಗ್ರಾಮಗಳ ಬಳಿ ಹೂಳೆತ್ತಲು ತೀರ್ಮಾನಿಸಲಾಗಿದೆ. ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಕೊಟ್ಟೂರಿನ ಶಂಕರ ಮಹಸ್ವಾಮಿಜಿ, ನಂದಿಪುರದ ಮಹೇಶ್ವರ ಸ್ವಾಮಿಜಿ ಮರಿಯಮ್ಮನಹಳ್ಳಿ ಗುರುಪಾದ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಬಳ್ಳಾರಿಯ ಕಲ್ಯಾಣ ಸ್ವಾಮಿಜಿ, ಬೆಣ್ಣಿಹಳ್ಳಿ ಹಿರೇಮಠ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಜಿ ಹಾಗೂ ಕೊಟ್ಟೂರು ಚಾಮಕೋಟೆ ಮಠದ ಸಿದ್ದಲಿಂಗ ಶಿವಾಚಾರ್ಯ ಮಹಸ್ವಾಮಿಗಳು ಬೆಂಬಲ ಸೂಚಿಸಿದ್ದಾರೆ ಎಂದರು.

ಜಿಲ್ಲಾಡಳಿತ ಹಾಗೂ ತುಂಗಭದ್ರಾ ಆಡಳಿತ ಮಂಡಳಿ ಮೌಕಿಕವಾಗಿ ಹೂಳೆತ್ತಲು ಒಪ್ಪಿಗೆ ಸೂಚಿಸಿದ್ದಾರೆ. ಹೂಳೆತ್ತುವ ಕಾರ್ಯಕ್ಕೆ ಡೀಜಲ್ ಉಟೋಪಚಾರ ಸೇರಿದಂತೆ ಪ್ರತಿದಿನ ಲಕ್ಷಾಂತರ ರೂ. ಖರ್ಚು ತಗುಲಿದ್ದು, ಇದನ್ನು ರೈತರು ಹಾಗೂ ಕೆಲ ದಾನಿಗಳು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು. ಬಳ್ಳಾರಿ,ಕೊಪ್ಪಳ, ರಾಯಚೂರು, ಆಂಧ್ರ ಪ್ರದೇಶದ ಅನಂತಪುರ, ಕರ್ನೂಲ್, ಕಡಪ, ತೆಲಂಗಾಣ ರಾಜ್ಯದ ಮಹೆಬೂಬ್ ನಗರ ಸೇರಿದಂತೆ ಒಟ್ಟು 15ಲಕ್ಷ ಎಕರೆ ಜಮೀನು ಹಾಗೂ ಪಟ್ಟಣ, ಮತ್ತು ಗ್ರಾಮಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ಜಲಾಶಯ ಒದಗಿಸುತ್ತಿದೆ ಎಂದರು.

ಕಳೆದ ಮೂರು ದಶಕಗಳಿಂದ ಜಲಾಶಯದ ಹೂಳನ್ನು ತೆಗೆಯಬೇಕು ಎನ್ನುವ ಕುರಿತು ಬಂದಿರುವ ಸರ್ಕಾರಗಳು ಹೇಳಿಕೊಂಡಿವೆ ಆದರೂ, ಕಾರ್ಯ ರೂಪಕ್ಕೆ ತರುವ ಕೆಲಸ ಆಗಿಲ್ಲ. ಜಲಾಶಯದ ಕೆಳ ಭಾಗದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸುವ ಬಗ್ಗೆ ಸರಕಾರ ಮಾತನಾಡುತ್ತಿದೆ. ಜಲಾಶಯದ ಹಿನ್ನೀರಿನ ವ್ಯಾಪ್ತಿಯ ತುಂಗಭದ್ರಾ ಜಲಾಶಯದಿಂದ ಸಿಂಗಟಲೂರು ಜಲಾಶಯದವರಗೆ 60ಕಿಮಿ ಉದ್ದವಿದ್ದು, ಬಲಗಡೆ ಮತ್ತು ಎಡಗಡೆ ಇರುವ ಲಕ್ಷಾಂತರ ಎಕರೆ ಜಮೀನುಗಳಿಗೆ ಫಲವತ್ತಾದ ಹೂಳನ್ನು ಹಾಕಿಸಿಕೊಳ್ಳಲು ಸಿದ್ಧರಿದ್ದಾರೆ ಎಂದು ಹೇಳಿದರು.

ಈ ಜಲಾಶಯ 133 ಟಿಎಂಸಿಯಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ನಿರೀಕ್ಷೆಯಂತೆ ವಾರ್ಷಿಕ 0.45 ಟಿಎಂಸಿಯಷ್ಟು ಹೂಳು ತುಂಬುವ ಮೂಲಕ ಈಗ ಜಲಾಶಯದಲ್ಲಿ 33 ಟೆಎಂಸಿಯಷ್ಟು ಹೂಳು ತುಂಬಿ ನೀರಿನ ಸಂಗ್ರಹ ಸಾಮರ್ಥ್ಯ 100 ಟಿಎಂಸಿಗಳಿಗಿಂತಲೂ ಕುಸಿದಿದೆ ಎಂದರು.

ಇದರಿಂದ ನೀರಿನ ಸಂಗ್ರಹ ಸಾಮಥ್ಯ ಕುಸಿದಿರುವುದರಿಂದ ಉತ್ತಮ ಮಳೆಯಾದರೂ, ಜಲಾಶಯ ತುಂಬಿ ನೀರು ಆಂದ್ರ ಪ್ರದೇಶಕ್ಕೆ ನದಿ ಮೂಲಕ ಹರಿದು ಹೋಗುತ್ತದೆ. ಅಲ್ಲದೆ ಎರೆಡನೇ ಅವಧಿ ಬೆಳೆಗೆ ನೀರಿನ ಕೊರತೆಯನ್ನೂ ಎದುರಿಸುತ್ತಿದೆ ಎಂದು ತಿಳಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಪುರುಷೋತ್ತಮಗೌಡ, ಜಿಲ್ಲಾ ಕಾರ್ಯಾಧಕ್ಷ ಗೋಣಿ ಬಸಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಎಲ್.ಕೆ.ನಾಯ್ಡು, ಜಿಲ್ಲಾ ಉಪಾಧ್ಯಕ ಕುಮಾರ ಸ್ವಾಮಿ ಹಾಗೂ ಶಿವಯ್ಯ ಇತರರು ಇದ್ದರು.

LEAVE A REPLY

Please enter your comment!
Please enter your name here