ನಗರಸಭೆ ಆದಾಯ ಹೆಚ್ಚಿಸುವಂತೆ ಡಿಸಿ ಸೂಚನೆ

0
337

ಬಳ್ಳಾರಿ /ಹೊಸಪೇಟೆ:ನಗರದಲ್ಲಿ ಲಾಡ್ಜ್, ಹೋಟೆಲ್, ಕಲ್ಯಾಣ ಮಂಟಪ ಇತರೆ ವಾಣಿಜ್ಯ ಕಟ್ಟಡಗಳನ್ನು ಸಮೀಕ್ಷೆ ನಡೆಸಿ, ಅವುಗಳ ಆಸ್ತಿ ಹಾಗೂ ನೀರಿನ ಕರ ವಸೂಲಿ ಮಾಡುವ ಮೂಲಕ ನಗರಸಭೆ ಆದಾಯ ಮೂಲವನ್ನು ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿ ರಾಮಪ್ರಸಾತ್ ಮನೋಹರ್ ಸೂಚಿಸಿದರು.

ನಗರಸಭೆ ಸಭಾಂಗಣದಲ್ಲಿ ಬುಧವಾರ ಜರುಗಿದ ವಿಶೇಷ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರಸಭೆ ಆದಾಯ ಮೂಲ ಕುಂಠಿತಗೊಂಡಿದ್ದು, ಕರ ವಸೂಲಾತಿಯಲ್ಲಿ ನಗರಸಭೆ ಆಡಳಿತ ಹಿಂದುಳಿದಿದೆ. ಎಲ್ಲಾ ಮೂಲಗಳಿಂದ ಆದಾಯವನ್ನು ಹೆಚ್ಚಿಸುವ ಕೆಲಸವಾಗಬೇಕು. ಕೂಡಲೇ ವಾಣಿಜ್ಯ ಕಟ್ಟಡ ಹಾಗೂ ಮಳಿಗೆಗಳ ಸಮೀಕ್ಷೆ ನಡೆಸಿ, ಆಸ್ತಿ ಹಾಗೂ ನೀರಿನ ತೆರಿಗೆಯನ್ನು ಕೂಡಲೇ ಪಾವತಿಸುವಂತೆ ಮಾಲೀಕರಿಗೆ ಸೂಕ್ತ ನೋಟಿಸ್ ಜಾರಿ ಮಾಡಬೇಕು. ಕೂಡಲೇ ಸರ್ಕಾರ ನಿಗಧಿ ಪಡಿಸಿದ ದರದಂತೆ ಆಸ್ತಿ ಹಾಗೂ ನೀರಿನ ತೆರಿಗೆಯನ್ನು ತುಂಬಬೇಕು .ಇಲ್ಲವಾದಲ್ಲಿ ನೀರು ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಅಭಿವೃದ್ಧಿ ಅನುದಾನಕ್ಕಾಗಿ ಸರ್ಕಾರವನ್ನು ಎದುರು ನೋಡುವುದನ್ನು ಬಿಟ್ಟು ಸ್ಥಳೀಯವಾಗಿ ಸೋರಿಕೆಯಾಗುತ್ತಿರುವ ನಗರಸಭೆ ಆದಾಯ ಮೂಲವನ್ನು ಹುಡಕಬೇಕು. ಸರ್ಕಾದ ಅನುದಾನ ಜೊತೆಯಲ್ಲಿ ಸ್ಥಳೀಯ ಆದಾಯದೊಂದಿಗೆ ವಾರ್ಡುಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುವುದು. ನಿಯಮ ಉಲ್ಲಂಘನೆ ಮಾಡಿ ಅಕ್ರಮ ದಾರಿಯಲ್ಲಿ ನಡೆಯುವ ಕೆಲ ಜನರನ್ನು ಹಾದಿ ತರುವ ಜರೂರು ಇದೆ. ಅವರು ಬಾರದೇ ಇದ್ದಲ್ಲಿ ಕಾನೂನು ಅನಸಾರ ಅವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ನಗರದ ಮುಖ್ಯ ರಸ್ತೆ ಸೇರಿದಂತೆ ಕೆಲ ಪ್ರದೇಶದಲ್ಲಿ ಒತ್ತುವರಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವುಗಳಿಂದ ರಸ್ತೆ ಅಭಿವೃದ್ಧಿಗೆ ಅಡಚಣೆಯಾಗಿದೆ. ಹಂಪಿ ರಸ್ತೆ, ಸಾರ್ವಜನಿಕ ನೂರು ಹಾಸಿಗೆ ಆಸ್ಪತ್ರ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ರಸ್ತೆ ಒತ್ತುವರಿಯಾಗಿದೆ. ಇವುಗಳ ಸಮೀಕ್ಷೆ ನಡೆಸಲಾಗುವುದು. ಅತಿಕ್ರಮಣ ಕಂಡು ಬಂದಲ್ಲಿ ಕೂಡಲೇ ಕಟ್ಟಡಗಳನ್ನು ತೆರವುಗೊಳಿಸಲಾಗುವುದು.  ಹೀಗಾಗಿ ನಗರ ಅಭಿವೃದ್ಧಿಗಾಗಿ ಕೈಜೋಡಿಸಿ, ಮಾಲೀಕರು, ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆಯಿಂದ ಕಾರ್ಯಚರಣೆ ನಡೆಸಿ ತೆರವುಗೊಳಿಸಲಾಗುವುದು ಎಂದು ಹೇಳಿದರು.

ಅಲ್ಲದೇ ಸರ್ಕಾರಿ ಸ್ಥಳಗಳಲ್ಲಿ ಮಳಿಗೆ ನಿರ್ಮಾಣ ಮಾಡಿಕೊಂಡು ಇತರರಿಗೆ ಬಾಡಿಗೆ ನೀಡಿದ ಪ್ರಕರಣಗಳು ಕಂಡು ಬಂದಿದ್ದು, ಪರಿಶೀಲನೆ ನಡೆಸಿ, ಕಾರ್ಯಚರಣೆ ನಡೆಸಲಾಗುವುದು. ಸಾರ್ವಜನಿಕರು, ಅಕ್ರಮಿಸಿಕೊಂಡ ಸ್ಥಳಗಳ ಬಗ್ಗೆ ಪೌರಾಯುಕ್ತರಿಗೆ ಮಾಹಿತಿ ನೀಡಬಹುದಾಗಿದ್ದು, ಅವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿ ಕಾರ್ಯ ಮಾಡುವ ವೇಳೆಯಲ್ಲಿ ಕೆಲವರಿಗೆ ತೊಂದರೆಯಾಗುವುದು ನಿಜ. ಆದರೂ ಅಭಿವೃದ್ಧಿ ದೃಷ್ಠಿಯಿಂದ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಯಾರೇ ಅಡ್ಡ ಬಂದರೂ ಯಾವುದೇ ಪ್ರಭಾವಿ ವ್ಯಕ್ತಿಗಳೇ ಇರಲಿ ಅವರ ವಿರುದ್ಧ 353 ಕಾಯಿದೆಯಡಿಯಲ್ಲಿ ಕ್ರಮ ಜರುಗಿಸಲಾಗುವುದು. ಕಾನೂನಿನಲ್ಲಿ ಎಲ್ಲವೂ ಇದ್ದು, ಜನಪರ ಕಾರ್ಯಗಳಿಗೆ ಅಡ್ಡಿಪಡಿಸುವ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ನಗರಸಭೆಯಲ್ಲಿ ಕೆಲ ನಗರಸಭೆ ಸದಸ್ಯರು, ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ನಕಲಿ ದಾಖಲೆ ಸೃಷ್ಠಿಸಿ, ಸಾರ್ವಜನಿಕರ ಆಸ್ತಿಯನ್ನು ಪರಬಾರೆ ಮಾಡಿದ ಪ್ರಕರಣ ಸಂಬಂಧ ಪಟ್ಟಂತೆ, ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಕುರಿತು ನಗರಸಭೆ ಸದಸ್ಯರು ಸೇರಿ ಒಟ್ಟು ಆರು ಜನರನ್ನು ಬಂಧಿಸಲಾಗಿತ್ತು. ಕಂದಾಯ ಇಲಾಖೆ ಕೆಲವು ಅಧಿಕಾರಿ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆಗೊಳಿಸಿದ್ದರು. ಇದರಿಂದಾಗಿ ನಗರಸಭೆ ಆಡಳಿತ ಯಂತ್ರ ಕುಂಟುತ್ತಾ ಸಾಗಿತ್ತು.

ಈ ಬೆಳವಣಿಗೆಯಿಂದ ನಗರಸಭೆ ಕಂದಾಯ ವಿಭಾಗದಲ್ಲಿ ಸಾರ್ವಜನಿಕರ ಕೆಲಸ-ಕಾರ್ಯಗಳು ನಡೆತ್ತಿಲ್ಲ ಎನ್ನುವ ದೂರು ಹಾಗೂ ನಗರದಲ್ಲಿ ನೆನೆಗುದಿಗೆ ಬಿದ್ದ ಹಲವಾರು ವಿಷಯಗಳ ಕುರಿತು ಜಿಲ್ಲಾಧಿಕಾರಿಗಳು ಚರ್ಚಿಸಿ ಮುಂದಿನ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಆನಂದಸಿಂಗ್, ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಉಪಾಧ್ಯಕ್ಷೆ ಸುಮಂಗಳಮ್ಮ ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಹಾಗೂ ತಹಶೀಲ್ದಾರ ಎಚ್.ವಿಶ್ವನಾಥ ಇತರರು ಇದ್ದರು.

LEAVE A REPLY

Please enter your comment!
Please enter your name here