ಕೃಷಿ ಹೊಂಡಕ್ಕೆ ಮೊಸಳೆ ಪ್ರತ್ಯಕ್ಷ.!

0
131

ಯಾದಗಿರಿ/ಸುರಪುರ: ತಾಲೂಕಿನ ಶಖಾಪುರ ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮೊಸಳೆ ಪತ್ತೆಯಾಗಿದೆ. ಈ ಕುರಿತು ಜಮೀನಿನ ಮಾಲೀಕರು, ಸಾರ್ವಜನಿಕರು ಹೊಂಡದಲ್ಲಿ ಮೊಸಳೆ ಇರುವುದನ್ನು ನೋಡಿ ಗಾಬರಿಗೊಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ತೆರಳಿದ ಅರಣ್ಯ ಅಧಿಕಾರಿಗಳು ಮೊಸಳೆ ಹಿಡಿಯಲು ಹಲವು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಹೊಂಡದಲ್ಲಿನ ನೀರು ಖಾಲಿಯಾದರೆ ಮಾತ್ರ ಮೊಸಳೆ ಸುಲಭವಾಗಿ ಹಿಡಿಯಲು ಸಾಧ್ಯವೆಂದು ತೀರ್ಮಾನಿಸಿದ್ದಾರೆ. ಕೃಷಿ ಹೊಂಡದಲ್ಲಿನ ನೀರನ್ನು ಪಂಪ್ ಸೆಟ್ ಯಂತ್ರದ ಮೂಲಕ ಸಂಜೆ ವೇಳೆಗೆ ಖಾಲಿ ಮಾಡಿದ್ದಾರೆ.
ಬಳಿಕ ಗ್ರಾಮದ ಮೀನುಗಾರರ ಸಹಾಯದಿಂದ ಬಲೆ ಬೀಸಿ ಮೊಸಳೆಯನ್ನು ಹಿಡಿದಿದ್ದಾರೆ. ಆ ಮೂಲಕ ಮೊಸಳೆಯನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಹಗ್ಗದಿಂದ ಅದನ್ನು ಕಟ್ಟಿ ಇಲಾಖಾ ಕಚೇರಿಗೆ ತಂದಿದ್ದಾರೆ.

ಮೊಸಳೆಯನ್ನು ಸಮೀಪದ ನಾರಾಯಣಪುರ ಡ್ಯಾಂನಲ್ಲಿ ಬಿಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅಂತೆಯೇ ವಾಹನವೊಂದರಲ್ಲಿ ಮೊಸಳೆಯನ್ನು ಹೊತ್ತೊಯ್ದು ಡ್ಯಾಮಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.

ಮೊಸಳೆ ಕಾರ್ಯಾಚರಣೆ ಸಂದರ್ಭದಲ್ಲಿ ಸುರಪುರ ವಲಯ ಅರಣ್ಯಾಧಿಕಾರಿ ಶಾಂತರಡ್ಡಿ, ಉಪ ವಲಯ ಅರಣ್ಯಾಧಿಕಾರಿ ಶರಣಪ್ಪ ಕುಂಬಾರ, ಅರಣ್ಯ ರಕ್ಷಕರಾದಯಂಕಪ್ಪ ಗೋನಾಲ, ಗಿರೀಶ ಕರ್ನಾಳ, ಉಪ್ಪಳಪ್ಪ ಇದ್ದರು.

ಮೊಸಳೆ ಹೇಗೆ ಬಂತು..! ಹಲವು ಪ್ರಶ್ನೆ
ಜಮೀನಿನಲ್ಲಿರುವ ಕೃಷಿ ಹೊಂಡದ ಸಮೀಪದಲ್ಲಿಯೇ ದೊಡ್ಡ ಹಳ್ಳ ಹರಿಯುತ್ತಿದ್ದು, ಹಳ್ಳದ ಮಧ್ಯಭಾಗದಲ್ಲಿ ಅಲ್ಲಲ್ಲಿ ನೀರು ಸಂಗ್ರಹವಾಗಿರುವ ಹಳ್ಳದಲ್ಲಿ ಉಳಿದಿದ್ದ ಮೊಸಳೆ ಸಮೀಪದ ನೀರಿನ ಹೊಂಡ ಸೇರಿರಬಹುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಆದರೆ ಗ್ರಾಮಸ್ಥರು ಇದುವರೆಗೂ ನಾವೆಲ್ಲೂ ಮೊಸಳೆ ಕಾಣುತ್ತಿದ್ದಿಲ್ಲ. ಸಮೀಪದ ಹೊಳೆಗಳಲ್ಲಿಯೇ ಮೊಸಳೆ ಕಂಡಿರದ ನಾವು ಕಳೆದ ನಾಲ್ಕಾರು ವರ್ಷದಿಂದ ಸಾಕಷ್ಟು ಮೊಸಳೆಗಳನ್ನು ಕಾಣುತ್ತಿದ್ದೇವೆ. ಹಳ್ಳ, ಹೊಂಡದಲ್ಲಿಯೂ ಮೊಸಳೆ ಕಾಣುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

 

ವರದಿ: ಸೋಮಯ್ಯ ಹೊಸಮನಿ

LEAVE A REPLY

Please enter your comment!
Please enter your name here