ಬೋನಿಗೆ ಬಿದ್ದ ಚಿರತೆ,ಗ್ರಾಮಸ್ಥರ ನಿಟ್ಟುಸಿರು

0
130

ಮೈಸೂರು: ವೈದ್ಯರ ತೋಟದ ಮನೆಯಲ್ಲಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ತಾಲೂಕಿನ ಮೇಗಳಾಪುರ-ಹೊಸಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮೇಗಳಾಪುರ-ಹೊಸಹಳ್ಳಿ ಬಳಿ ಆಗಾಗ ಚಿರತೆಯೊಂದು ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ, ಕೈಗೆ ಸಿಕ್ಕ ಹಸು, ಕುರಿ, ನಾಯಿಗಳನ್ನು ತಿಂದು ಹಾಕುವ ಮೂಲಕ ಗ್ರಾಮಸ್ಥರನ್ನು ಭಯಭೀತಗೊಳಿಸಿತ್ತು. ಹಾಗಾಗಿ ಚಿರತೆಯನ್ನು ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರಂತೆ ಅರಣ್ಯಾಧಿಕಾರಿ ಹೊಸಹಳ್ಳಿ ಗ್ರಾಮದಲ್ಲಿರುವ ಡಾ.ನಾಗರಾಜ್ ಎಂಬುವವರ ತೋಟದ ಮನೆಯಲ್ಲಿ ಬೋನು ಇಟ್ಟಿದ್ದರು. ಭಾನುವಾರ ಬೆಳಗ್ಗೆ ಬೇಟೆಗೆ ಬಂದ ಚಿರತೆ ಬೋನಿಗೆ ಬಿದ್ದು ಘರ್ಜನೆ ಮಾಡುತ್ತಿದ್ದರಿಂದ ಗ್ರಾಮಸ್ಥರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ವಲಯ ಅರಣ್ಯಾಧಿಕಾರಿ ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆಯಾದ ೪ ವರ್ಷದ ಗಂಡು ಚಿರತೆಯನ್ನು ಕಾಡಿಗೆ ಬಿಟ್ಟಿದ್ದಾರೆ. ಮೇಗಳಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಚಿರತೆ ಸೆರೆಯಿಂದ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here