ಪೌರ ಕಾರ್ಮಿಕರ ದಿನಾಚರಣೆ..

0
187

ಬಳ್ಳಾರಿ /ಹೊಸಪೇಟೆ:ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದಿಂದ ನಗರದಲ್ಲಿಂದು ಪೌರ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.

ಸ್ಥಳೀಯ ನಗರಸಭೆಯ ಎಂ.ಪಿ.ಪ್ರಕಾಶ್ ಕಲಾ ಮಂದಿರದಲ್ಲಿಂದು ಜರುಗಿದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ್ ನಾಯ್ಡು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಗರದ ಅಭಿವೃದ್ಧಿ ಮತ್ತು ಸೌಂದರ್ಯೀಕರಣದಲ್ಲಿ ನಗರಸಭೆ ಪೌರ ಕಾರ್ಮಿಕರ ಶ್ರಮ ಅಪಾರವಾಗಿದೆ. ಅಂತಹ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ ಎಂದರು.

ನಗರಸಭೆ ಸದಸ್ಯ ಕೆ.ಗೌಸ್ ಮಾತನಾಡಿ, ನಗರದ ಸ್ವಚ್ಛತೆಗಾಗಿ ಹಗಲಿರಳು ಶ್ರಮಿಸುತ್ತಿರುವ ನಗರಸಭೆ ಪೌರ ಕಾರ್ಮಿಕರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪೌರ ಕಾರ್ಮಿಕರನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗೌರವಿಸಬೇಕು ಮತ್ತು ಅವರಿಗೆ ಮನ್ನಣೆ ನೀಡಬೇಕು. ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಕೇವಲ ಬೆರಳಣಿಗೆ ಜನಪ್ರತಿನಿಧಿಗಳು ಭಾಗವಹಿಸಿರುವುದು ಖೇಧಕರ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ, ಸನ್ಮಾನಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು ಎಂದರು. ಅಲ್ಲದೆ ನಗರದ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಜವಾಬ್ದಾರಿಯನ್ನು ಹೊರ ರಾಜ್ಯಗಳವರಿಗೆ ನೀಡದೆ, ಸೇವೆಯಿಂದ ನಿವೃತ್ತರಾದ ಪೌರ ಕಾರ್ಮಿಕರಿಗೆ ನೀಡಬೇಕು. ಇದರಿಂದ ಅವರ ಜೀವನ ನಿರ್ವಹಣೆ ಸುಲಭವಾಗಲಿದೆ ಎಂದರು.

ಸಮಾರಂಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಾದ ರಂಗಯ್ಯ, ಲಕ್ಷ್ಮಕ್ಕ, ರಾಮಾಂಜಿನೇಯ, ಅಂಜಿನಪ್ಪ ಹಾಗೂ ಸೇವೆಯಿಂದ ನಿವೃತ್ತರಾದ ಗರಗದ ಹುಲುಗಪ್ಪ ರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ನೂರ್ ಜಹಾನ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೈಯದ್, ಮನ್ಸೂರ್ ಅಹಮದ್, ಕಂದಾಯ ನಿರೀಕ್ಷಕ ಅಜಿತ್ ಸಿಂಗ್, ವ್ಯವಸ್ಥಾಪಕ ಮಂಜುನಾಥ, ಲೆಕ್ಕಾಧಿಕಾರಿ ಲಿಯಾಕತ್ ಅಲಿ, ಪರಿಸರ ಅಭಿಯಂತರರಾದ ಶಿಲ್ಪಶ್ರೀ, ಶರ್ಮಾಸ್ ವಲಿ, ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಮಾರೆಣ್ಣ, ಉಪಾಧ್ಯಕ್ಷ ಒಬಳಪ್ಪ, ಮುಖಂಡ ಕಣ್ಣಿ ಶ್ರೀಕಂಠ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here