ನೀರು ಬಿಡದಿದ್ದರೆ ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ..

0
165

ಬಳ್ಳಾರಿ/ ಬಳ್ಳಾರಿ:ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 6 ಟಿಎಂಸಿ ನೀರು ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿದ್ದು ಹೆಚ್‍ಎಲ್‍ಸಿ ಮತ್ತು ಎಲ್‍ಎಲ್‍ಸಿ ಕಾಲುವೆಗೆ ನೀರು ಪೂರೈಸದೇ ಹೋದರೆ ನಾಳೆಯಿಂದಲೇ ತುಂಗಭದ್ರಾ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದ್ದಾರೆ.ಇಂದು ನಗರದಲ್ಲಿ ನೂರಾರು ರೈತರೊಡಗೂಡಿ ಪ್ರತಿಭಟನೆ ನಡೆಸಿದ ತುಂಗಭದ್ರಾ ರೈತ ಸಂಘವು ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿ, ಆಗಸ್ಟ್ 29ರಂದು ಟಿಬಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್‍ಎಲ್‍ಸಿ ಕಾಲುವೆಗೆ ಪ್ರತಿ ತಿಂಗಳು 20 ರಿಂದ 30ರವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಬೇಕು. ಹೆಚ್‍ಎಲ್‍ಸಿ  ಕಾಲುವೆಗೆ ಪ್ರತಿ ತಿಂಗಳು 25 ರಿಂದ 5ರವರೆಗೆ ನೀರು ಪೂರೈಕೆ ಸ್ಥಗಿತಗೊಳಿಸಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಲೆನಾಡಿನಲ್ಲಿ ಮಳೆ ಆಗಿರುವುದಿರಿಂದ ಜಲಾಶಯದಲ್ಲಿ 91 ಟಿಎಂಸಿ ನೀರು ಬಂದಿದೆ. ಕಳೆದ 10 ದಿನಗಳಲ್ಲಿ ರೈತರು ಕಡಿಮೆ ನೀರು ಪಡೆದಿದ್ದಾರೆ. ಇದೀಗ ಹೊಲ, ಗದ್ದೆಗಳಲ್ಲಿ ಬೆಳೆ ಬೆಳೆಯಲಾಗಿದ್ದು, ನೀರು ಬಿಡದೇ ಹೋದರೆ ಒಣಗಿ ಹೋಗುವ ಸಂಭವವಿದೆ. ಆದ್ದರಿಂದ ಕೂಡಲೇ ಕಾಲುವೆಗಳಿಗೆ ನೀರು ಬಿಡಬೇಕು. ಇಲ್ಲದೇ ಹೋದರೆ, ನಾಳೆಯಿಂದಲೇ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಐಸಿಸಿ ಸಭೆಯಲ್ಲಿ ನಿರ್ಣಯ:
ಈ ಕುರಿತು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ರೈತರ ಬಗ್ಗೆ ನಮಗೆ ಕಾಳಜಿ ಇದೆ. ತುಂಗಭದ್ರಾ ಜಲಾಶಯದ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ರೈತರಿಗೆ ನೀರು ಪೂರೈಸಲಾಗುತ್ತದೆ. ರೈತರು ನೀಡಿದ ಮನವಿಯನ್ನು ತುಂಗಭದ್ರಾ ಜಲಮಂಡಳಿ ಅಧ್ಯಕ್ಷರು, ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಹೆಚ್‍ಎಲ್‍ಸಿ ಮತ್ತು ಎಲ್‍ಎಲ್‍ಸಿ ಕಾಲುವೆಗಳಿಗೆ ಎಷ್ಟು ಪ್ರಮಾಣ ನೀರು ಹರಿಸಲಾಗಿದೆ? ಅಧಿಕಾರಿಗಳಿಂದ ಮಾಹಿತಿ ಪಡೆದು ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಡಿ.ಶಿವಯ್ಯ, ವೀರೇಶಗೌಡ, ಶ್ರೀಧರ್ ಗೌಡ, ಹೊನ್ನನಗೌಡ, ಗಂಗಾವತಿ ವೀರೇಶ, ಕೊಟ್ರೇಶಗೌಡ, ಟಿ.ರಂಜಾನ್ ಸಾಬ್, ಪಂಪಾಪತಿ, ಸದಾಶಿವರೆಡ್ಡಿ, ಬಸವನಗೌಡ, ಶರಣಪ್ಪ, ಭೀಮನಗೌಡ, ಬಸಯ್ಯ ಸ್ವಾಮಿ, ಮೃತ್ಯುಂಜಯ, ರಾಮನಗೌಡ ಸೇರಿದಂತೆ ನೂರಾರು ರೈತರು ಇದ್ದರು.

LEAVE A REPLY

Please enter your comment!
Please enter your name here