ಸಂಘಟನೆಯು ಬಡವರ ಸೇವೆಗೆ ಮೀಸಲಿರಲಿ:

0
115

ನೂತನವಾಗಿ ಅಸ್ತಿತ್ವಕ್ಕೆ ಬಂದ ಪ್ರೇರಣಾ ಗೆಳೆಯರ ಬಳಗ – ಕೇವಲ ಹೆಸರಿಗೆ ಮಾತ್ರ ಇರದೇ ಬಡವರ ಸೇವೆಗೆ ಮೀಸಲಿರಲಿ: ಜಿ.ಸೋಮಶೇಖರ್ ರೆಡ್ಡಿ

ಬಳ್ಳಾರಿ,/ಬಳ್ಳಾರಿ :ಯುವಕರು ಕೇವಲ ಹೆಸರಿಗೆ ಮಾತ್ರ ಸಂಘಟನೆಗಳನ್ನು ಹುಟ್ಟು ಹಾಕದೇ ಬಡವರಿಗೆ ಎಲ್ಲ ರೀತಿಯಿಂದಲೂ ನೆರವಾಗುವ ಉತ್ತಮ ಅಭಿರುಚಿಗಳನ್ನು ಹೊಂದಿರಬೇಕೆಂದು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಶುಭ ಸಲಹೆ ನೀಡಿದರು.

ಇಲ್ಲಿನ ಡಾ.ರಾಜ್ ಕುಮಾರ್ ರಸ್ತೆಯ ತಾರಾನಾಥ್ ಆಯುರ್ವೇದಿಕ್ ಕಾಲೇಜಿನ ಹಿಂಭಾಗದ ಶೇಕ್ಷಾವಲಿ ದರ್ಗಾ ಬಳಿ ಪ್ರೇರಣಾ ಗೆಳೆಯರ ಬಳಗ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ದೀಪ ಬೆಳಗಿ ಮಾತನಾಡಿ, ಯುವಕರು ಸಮಾಜ ಸೇವೆಗೆ ಮುಂದಾಗಬೇಕು. ಬಳ್ಳಾರಿ ನಗರದಲ್ಲಿ ಇಂದಿಗೂ ಅದೆಷ್ಟೋ ಕುಟುಂಬಗಳು ಸರ್ಕಾರಿ ಸವಲತ್ತುಗಳಿಲ್ಲದೇ ವಂಚನೆಗೊಳಗಾಗಿವೆ. ಅಂತಹ ಬಡವರನ್ನು ಗುರುತಿಸಿ ಸರ್ಕಾರಿ ಸವಲತ್ತುಗಳನ್ನು ಕೊಡಿಸಲು ಮುಂದಾಗಬೇಕು.

ಭ್ರಷ್ಟಾಚಾರ, ಲಂಚಗುಳಿತನದಿಂದ ಬಡವರು ನಲುಗಿ ಹೋಗುತ್ತಿದ್ದಾರೆ. ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ, ಆರೋಗ್ಯ ಇತ್ಯಾದಿ ಸೌಲಭ್ಯಗಳನ್ನು ಕೊಡಿಸಲು ಮುಂದೆ ಬಂದಲ್ಲಿ ನಮ್ಮ ಸಹಕಾರ ಯಾವಾಗಲೂ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಪ್ರೇರಣಾ ಗೆಳೆಯರ ಬಳಗಕ್ಕೆ ಅಗತ್ಯ ನೆರವು ಕೊಡಿಸುವುದಾಗಿ ಹೇಳಿದರು.

ಜೆಡಿಎಸ್ ಮುಖಂಡ ಮೀನಳ್ಳಿ ತಾಯಣ್ಣ ಮತ್ತು ಬಿಜೆಪಿ ಮುಖಂಡ ಕೆಎಸ್ ದಿವಾಕರ್ ಅವರು ಸಹ ಮಾತನಾಡಿ, ಸಮಾಜದಲ್ಲಿ ಇಂದಿಗೂ ಕೆಲ ಅನಿಷ್ಟಗಳು ತಾಂಡವವಾಡುತ್ತಿವೆ. ಸರ್ವರಿಗೂ ಒಳಿತಾಗುವ ದಿಸೆಯಲ್ಲಿ ಪ್ರೇರಣಾ ಗೆಳೆಯರ ಬಳಗವು ಶ್ರಮಿಸಬೇಕು. ಯುವಕರು ಮನಸ್ಸು ಮಾಡಿದರೆ ಸಮಾಜದಲ್ಲಿ ಏನು ಬೇಕಾದರೂ ಬದಲಾವಣೆ ತರಲು ಸಾಧ್ಯ. ಜಿ.ಸೋಮಶೇಖರ್ ರೆಡ್ಡಿ ಅವರು ಶಾಸಕರಾಗಿದ್ದಾಗ ದಿನದ 24 ಗಂಟೆಯೂ ಕೆಲಸ ಮಾಡಿ ಯುವಕರಿಗೆ ಪ್ರೇರಣೆಯಾಗಿದ್ದಾರೆ. ಇಂತಹ ನಾಯಕರ ಕರ್ತೃತ್ವ ಶಕ್ತಿ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಕೆರಕೋಡಪ್ಪ, ಮಾಜಿ ಮೇಯರ್ ಬಸವರಾಜ್, ಕೃಷ್ಣ, ಚಿಟ್ಟಿ, ಹೇಮಂತ್ ರಾಜ್ ವೈ, ವೈ ಶಿವಧರ್ಮ, ಕೆ.ಸೋಮಶೇಖರ್, ಎಂ.ಸುರೇಶ್, ಕೆ.ರಾಜಶೇಖರ್, ಕೆ.ಹರಿಕುಮಾರ್, ಬಿಜೆಪಿ ಮುಖಂಡ ವೀರಶೇಖರ ರೆಡ್ಡಿ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here