ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ.

0
124

ಚಾಮರಾಜನಗರ/ಕೊಳ್ಳೇಗಾಲ:ನಾಲ್ಕನೇ ದಿನದ ರೈತರ ಹಾಗು ಗ್ರಾಮಸ್ಥರ ಧರಣಿಗೆ ಇಂದು ಬಿಎಸ್ಪಿ ಸಾಥ್ ನೀಡಿದ್ದು ಧರಣಿನಿರತರ ಬೇಡಿಕೆ ಈಡೇರಿಸುವಂತೆ ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದ್ದಾರೆ.
ನಂತರ ಸುದ್ದಿಗಾರರೊಡನೆ ಮಾತನಾಡಿದ ಎನ್.ಮಹೇಶ್ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಕುಂತೂರು ಗ್ರಾಮಸ್ಥರು ಐದು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೂ ಸಹ ಇವರ ಕೂಗಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ರೈತರು ತಮ್ಮ ದನ ಕರುಗಳು, ಹೆಂಡತಿ ಮಕ್ಕಳನ್ನು ಬಿಟ್ಟು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹೀಗಾದರೆ ಅವರ ಕತೆ ಏನಾಗಬೇಕು ಎಂದು ಪ್ರಶ್ನಿಸಿದರು.ಕಂದಾಯ ಇಲಾಖೆ, ಗ್ರಾಮಸ್ಥರು ಹಾಗು ಸರ್ಕಾರ ಮೂವರು ಕುಳಿತು ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಒಂದು ಸಭೆ ನಡೆಸಬೇಕು. ಒತ್ತುವರಿ ಎಂದು ಹೇಳಲಾಗುತ್ತಿರುವ ಜಾಗ ಕಾನೂನು ಪ್ರಕಾರ ಪರಭಾರೆ ಮಾಡಿದ್ದರೆ ಅದನ್ನು ಸರ್ಕಾರ ದಾಖಲಾತಿ ಮೂಲಕ ಹೇಳಬೇಕು. ಕಾರ್ಖಾನೆ ಮಾಲೀಕರು ಇಷ್ಟು ವಿಸ್ತೀರ್ಣದ್ದು ತಮ್ಮ ಆಸ್ತಿ ಎಂದು ಹೇಳಿಕೊಳ್ಳಲು ಸೂಕ್ತ ಪುರಾವೆ ತೋರಿಸಬೇಕು. ಇಲ್ಲದಿದ್ದಲ್ಲಿ ಇದನ್ನು ಭೂಕಬಳಿಕೆ ಎಂದು ಹೇಳಬೇಕಾಗುತ್ತದೆ ಎಂದರು.ಕೆರೆಕಟ್ಟೆ, ಗೋಮಾಳ, ಬೆಟ್ಟ ಇವುಗಳನ್ನು ಒತ್ತುವರಿ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ ಒತ್ತುವರಿಯಾಗಿದೆ. ಇದು ಕಾನೂನು ಬಾಹಿರ. ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೋ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.ಗ್ರಾಮಸ್ಥರು ನಾಲ್ಕು ದಿನಗಳಿಂದ ಅನಿರ್ಧಿಷ್ಟಾವಧಿ ಧರಣಿ ಕೂತಿರುವುದು ಅಧಿಕಾರಿಗಳಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು ಕೂಡಲೇ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಇದೇ ಅಕ್ರಮ ಜಾಗವನ್ನು ತೆರವುಗೊಳಿಸುವಂತೆ 2014ರಲ್ಲೇ ಜಿಲ್ಲಾಡಳಿತದಿಂದ ಆದೇಶವಾಗಿತ್ತು. ಆದರೂ ಇದುವರೆಗೂ ತೆರವಾಗಿಲ್ಲ. ಇದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು. ಬಹುಜನ ಸಮಾಜ ಪಕ್ಷ ಗ್ರಾಮದ ಮತ್ತು ರೈತರ ಪರವಾಗಿದೆ. ಅವರ ಸಂರಕ್ಷಣೆಗೆ ಸದಾ ಸಿದ್ಧವಾಗಿದೆಎಂದು ಹೇಳಿದರು.ಈ ವೇಳೆ ಬಿಎಸ್ಪಿ ಮುಖಂಡ ರಾಮಕೃಷ್ಣ, ಜಕಾವುಲ್ಲ, ಇಮ್ತಿಯಾಜ್, ಕುಂತೂರು ಗ್ರಾಮದ ನಾಡಗೌಡ ನಾಗರಾಜಪ್ಪ, ಮುಖಂಡರಾದ ನಿಂಗಯ್ಯ, ಮಹಾದೇವಪ್ಪ, ರವಿ, ಬಸವಣ್ಣ, ಚಂದ್ರಪ್ಪ, ಮೂರ್ತಿ, ಕಣ್ಣಪ್ಪ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here