ಅಂತರ್ ರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆ

0
176

ಬಳ್ಳಾರಿ /ಹೊಸಪೇಟೆ:  ಮಿತಿ ಮೀರಿದ ಜನಸಂಖ್ಯೆಯಿಂದಾಗಿ ವನ್ಯಜೀವಿಗಳ ನೈಸರ್ಗಿಕ ನೆಲೆವೀಡುಗಳು ವಿನಾಶದ ಅಂಚಿನಲ್ಲಿವೆ ಎಂದು ಉಪನ್ಯಾಸಕ ಹಾಗೂ ವನ್ಯಜೀವಿ ಸಂಶೋಧಕ ಸಮದ್ ಕೊಟ್ಟೂರು ಕಳವಳ ವ್ಯಕ್ತಪಡಿಸಿದರು.
ವನ್ಯಜೀವಿ ಮತ್ತು ನಿಸರ್ಗ ಪರ ಸಂಸ್ಥೆಯು ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಸ್ಥಳೀಯ ನ್ಯಾಷನಲ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಜೀವ ವೈವಿಧ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲೆಡೆ ವನ್ಯಜೀವಿಗಳ ಬೇಟೆ, ಅಪರೂಪದ ಔಷಧಿಗಿಡಗಳ ಕಳ್ಳಸಾಗಾಟ ಹೆಚ್ಚಾಗುತ್ತಿದೆ. ಬೀಜ ಕಂಪನಿಗಳ ಲಾಭದ ಹುನ್ನಾರಕ್ಕೆ ಅಪಾರ ಸಾವಿರಾರು ಆಹಾರ ತಳಿಗಳು ಬಲಿಯಾಗುತ್ತಿವೆ. ಒಂದೇ ತಳಿಯ ಹೈಬ್ರಿಡ್ ಆಹಾರ ಧಾನ್ಯಗಳ ಬೆಳೆಯಿಂದಾಗಿ ಹಾಗೂ ಅಪಾರ ಕ್ರಿಮಿನಾಶಗಳ ಬಳಕೆಯಿಂದಾಗಿ ಇಂದು ಸಹಸ್ರಾರು ಪ್ರಬೇಧಗಳ ಚಿಟ್ಟೆಗಳು, ದುಂಬಿಗಳ ಹಾಗೂ ಇತರ ಕೀಟಗಳು ನಾಶವಾಗುತ್ತಿವೆ. ಇದರ ಪರಿಣಾಮದಿಂದಾಗಿ ಮುಂದಿನ ದಿನಗಳನ್ನು ಆಹಾರ ಬೆಳೆಗಳ ಇಳುವರಿ ಕುಸಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತ ದೇಶವು ಜಗತ್ತಿನ ಶೇ.2.5 ರಷ್ಟು ಭೂಮಿಯನ್ನು ಹೊಂದಿದೆ; ಆದರೆ ಜಗತ್ತಿನ ಶೇ.7.5 ರಷ್ಟು ಜೀವ ವೈವಿಧ್ಯತೆಯನ್ನು ಸಂರಕ್ಷಿಸುತ್ತಿದೆ. ಜಗತ್ತಿನ 18 ಸೂಕ್ಷ್ಮ ಪರಿಸರ ತಾಣಗಳಲ್ಲಿ ಎರಡು ತಾಣಗಳು ಭಾರತದಲ್ಲಿವೆ, ಬಯಲು ಸೀಮೆಯ ಬಳ್ಳಾರಿಯಲ್ಲಿ ಅಪಾರ ಜೀವ ವೈವಿಧ್ಯತೆ ಇದ್ದು, ಇಲ್ಲಿ ಈಗಾಗಲೇ ನಾಲ್ಕು ವನ್ಯಜೀವಿ ಧಾಮಗಳಿವೆ, ಸಂಡೂರಿನಲ್ಲಿ ಪಶ್ಚಿಮ ಘಟ್ಟದ ಪಕ್ಷಿ ಸಂಕುಲವಿದೆ, ತುಂಗಭದ್ರಾ ನದಿಯಲ್ಲಿ ಅಪರೂಪದ ನೀರು ನಾಯಿಗಳು, ಮೊಸಳೆಗಳು ಹಾಗೂ ನೂರಾರು ಪ್ರಬೇಧದ ಮೀನು ಸಂಕುಲವಿದೆ, ಇವುಗಳನ್ನು ಸಂರಕ್ಷಿಸಲು ವನ್ಯಜೀವಿ ಮತ್ತು ನಿಸರ್ಗಪರ ಸಂಸ್ಥೆ ಕಳೆದ ಹದಿನೈದು ವರ್ಷಗಳಿಂದ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಜಾಗೃತರಾಗಿ ಜೀವ ವೈವಿಧ್ಯತೆಯನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಪ್ರಾಚಾರ್ಯ ಅಯೂಬ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ರಾಮಸ್ವಾಮಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು.  ಉಪನ್ಯಾಸಕ ಶಂಕರ ಗೌಡ ಹಾಗೂ ಪ್ರಶಿಕ್ಷಣಾರ್ಥಿಗಳಾದ ಶೀಲಾ, ಶಹನಾಜ್,  ಶಶಿಧರ ಹೆ.ಎಂ. ಇತರರು ಇದ್ದರು.

LEAVE A REPLY

Please enter your comment!
Please enter your name here