ಬಳ್ಳಾರಿ /ಹೊಸಪೇಟೆ:ಮೇಲುಜಾತಿಗಳ ಪಲ್ಲಟಗಳ ತಿಳಿವಿನ ಮೂಲಕ ಸಿದ್ಧಾಂತಗಳು ರೂಪುಗೊಂಡಿದ್ದು,  ಇದಕ್ಕೆ ಬದಲಾಗಿ ಕೆಳಜಾತಿಗಳ ಪಲ್ಲಟಗಳ ತಿಳಿವಿನ ಮೂಲಕ ಸಿದ್ಧಾಂತಗಳ ಪುನಾರಚನೆಯಾಗಬೇಕಿದೆ ಎಂದು ಹಂಪಿ ವಿವಿಯ ಕುಲಪತಿ ಪ್ರೊ. ಮಲ್ಲಿಕಾ ಎಸ್.ಘಂಟಿ, ಹೇಳಿದರು.

ಕನ್ನಡ ವಿವಿಯ ಸಾಹಿತ್ಯ ಅಧ್ಯಯನ ವಿಭಾಗ ಆರಂಭಿಸಿದ ನಮ್ಮ ಮಾತು ಎನ್ನುವ ವಾರದ ಮಾತು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು.

ಈ ನೆಲೆಯ ಚಿಂತನೆಗಳು ರೂಪುಗೊಳ್ಳಬೇಕಿದೆ. ದುಡಿಮೆ ಮತ್ತು ಮಾತು ಜೊತೆ ಜೊತೆಯಾಗಿದ್ದಾಗ ಮಾತಿಗೆ ಬೆಲೆ ಬರುತ್ತದೆ, ದುಡಿಮೆ ರಹಿತ ಮಾತುಗಳು ಮಲೀನವಾಗುತ್ತವೆ. ವಚನ ಪರಂಪರೆಯಲ್ಲಿಯೇ ಕೆಳಜಾತಿಗಳ ವಚನಕಾರ್ತಿಯರು ಅಲಕ್ಷಕ್ಕೆ ಒಳಗಾದರು, ಇಂಥವರ ಮಾತು ವಚನಗಳ ವಿಶ್ಲೇಷಣೆ ಮಾಡಿದರೆ ವಚನ ಪರಂಪರೆಯ ಭಿನ್ನ ಮುಖಗಳು ಅನಾವರಣಗೊಳ್ಳುತ್ತವೆ ಎಂದರು.

ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ರಹಮತ್ ತರೀಕೆರೆಂ ಮಾತನಾಡಿ, ‘ಮಾತು’ ಎನ್ನುವುದರ ಬಹುಮುಖಿ ನೆಲೆಗಳನ್ನು ವಿವರಿಸುತ್ತಾ ಮಾತು ವಾಗ್ವಾದಗಳನ್ನು ಹುಟ್ಟಿಸಬೇಕು, ಈ ವಾಗ್ವಾದಗಳು ಸಂಶೋಧನ ಪ್ರಶ್ನೆಗಳಾಗಿ ರೂಪಾಂತರ ಹೊಂದಬೇಕು. ಮಾತಿಗೆ ನಮ್ಮ ಚಿಂತನೆಯನ್ನು ರೂಪಿಸುವ ಮತ್ತು ತಿಳುವಳಿಕೆಯ ಮಿತಿಗಳನ್ನು ಕಾಣಿಸುವ ಶಕ್ತಿ ಇದೆ. ಹಾಗಾಗಿ ಇಂದು ‘ಮಾತನಾಡದಂತೆ’ ನಿಯಂತ್ರಿಸುವ ಶಕ್ತಿಗಳೂ ಇವೆ. ಈ ಎಲ್ಲಾ ವೈರುಧ್ಯಗಳ ನಡುವೆಯೇ ನಮ್ಮ ಸಂಶೋಧನೆಗಳು ಹೊಸ ಪ್ರಶ್ನೆಗಳನ್ನು ಆಯ್ದುಕೊಂಡು ಹುಡುಕಾಟ ನಡೆಸಬೇಕಿದೆ ಎಂದರು.

ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಅಮರೇಶ ನುಗಡೋಣಿ, ಸ್ವಾಗತಿಸಿದರು. ಸಂಶೋಧಕ ಅರುಣ್ ಜೋಳ ಕೂಡ್ಲಿಗಿ ಅವರು ನಿರೂಪಿಸಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ. ಮೋಹನ್ ಕುಂಟಾರ್, ಪ್ರೊ. ಶಿವಾನಂದ ವಿರಕ್ತಮಠ, ಪ್ರೊ.ವಿಠ್ಠಲರಾವ್ ಗಾಯಕವಾಡ ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.