ಮಾಜಿ ದೇವದಾಸಿ ಮಹಿಳೆಯರ ರಾಜ್ಯಮಟ್ಟದ ಸಮಾವೇಶ 12ರಂದು ಇಂದಿರಾ ಸವಿರುಚಿ ಕೈ ತುತ್ತು ನ.20ರೊಳಗೆ ಆರಂಭ: ಭಾರತಿ

ಬಳ್ಳಾರಿ /ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ಘೋಷಿಸಿದ್ದ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟಿನ್ ನವೆಂಬರ್ 1 ರಿಂದ 20ರೊಳಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಹೇಳಿದರು.

ಬಳ್ಳಾರಿಯಲ್ಲಿ ಮಾತನಾಡಿದ ಅವರು,
ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ಇಂದಿರಾ ಸವಿರುಚಿ ಕೈ ತುತ್ತು ಕ್ಯಾಂಟಿನ್ ಆರಂಭಿಸಲಾಗುತ್ತಿದೆ.
2018ರ ಮಾರ್ಚ್ ತಿಂಗಳೊಳಗೆ ಎಲ್ಲ ತಾಲೂಕುಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿ ತಾಲೂಕಿನ ಸ್ತ್ರೀಶಕ್ತಿ ಒಕ್ಕೂಟಗಳ ಗುಂಪಿನಿಂದ ಆಯ್ಕೆ ಮಾಡಿ ಜಿಲ್ಲಾ ಕೇಂದ್ರಗಳಲ್ಲಿ ಸ್ತ್ರೀಶಕ್ತಿ ಒಕ್ಕೂಟಗಳನ್ನು ರಚಿಸಿ, ಈ ಕ್ಯಾಂಟಿನ್ ಉಸ್ತುವಾರಿ ವಹಿಸಲಾಗುತ್ತದೆ.

ಸೆ.12ರಂದು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಮಾಜಿ ದೇವದಾಸಿ ಮಹಿಳೆಯರ ರಾಜ್ಯಮಟ್ಟದ ಸಮಾವೇಶ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಉಪಸ್ಥಿತರಿರಲಿದ್ದಾರೆ ಎಂದು ವಿವರಿಸಿದ ಅವರು, ಈ ಸಂದರ್ಭದಲ್ಲಿ ಮಾಜಿ ದೇವದಾಸಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಇರುವ ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ,ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಥಣಿಯ ಮಾಜಿ ದೇವದಾಸಿಯರಿಗೆ 30*40 ಅಡಿ ಅಳತೆಯ ನಿವೇಶನಗಳ ಹಕ್ಕುಪತ್ರಗಳ ವಿತರಣೆ, ಅಥಣಿ ತಾಲೂಕಿನ ಸುವರ್ಣ ಮಾದರ ಅವರು ರಚಿಸಿದ ಅಥಣಿ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನೆಯ ಕುರಿತು ಆರ್ಥಿಕ ಅಧ್ಯಯನ ಎಂಬ ಪುಸ್ತಕ ಮುದ್ರಣಕ್ಕಾಗಿ ಸಹಾಯಧನದ ಚೆಕ್ ವಿತರಣೆ, ಬಳ್ಳಾರಿ ಜಿಲ್ಲೆಯ 176 ನಿವೇಶನವುಳ್ಳ ಮಾಜಿ ದೇವದಾಸಿಯರಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಲು ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ರೀತಿಯ ಅರ್ಥಪೂರ್ಣ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.