ಆಸ್ತಿ ವಿವಾದಕ್ಕೆ‌ ಸಂಬಂಧಿಸಿ ದಲಿತ ವ್ಯಕ್ತಿಯ‌ ಮೇಲೆ ಹಲ್ಲೆ ಆರೋಪ.!?

0
15

ದೊಡ್ಡಬಳ್ಳಾಪುರ: ಆಸ್ತಿ ವಿವಾದಕ್ಕೆ‌ ಸಂಬಂಧಿಸಿ ದಲಿತ ವ್ಯಕ್ತಿಯ‌ ಮೇಲೆ ಮೇಲ್ವರ್ಗದ ವ್ಯಕ್ತಿಯೊಬ್ಬರು ಅಮಾನವೀಯವಾಗಿ ಥಳಿಸಿ, ನಿಂದಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ತಾಲೂಕಿನ ಹಾಡೋನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ನರಸಿಂಹಮೂರ್ತಿ ಎಂಬುವರು ಹಲ್ಲೆಗೆ ಒಳಗಾದ ವ್ಯಕ್ತಿ. ಇದೇ ಗ್ರಾಮದ ಕೇಶವ ಎಂಬುವರು ಹಲ್ಲೆ ನಡೆಸಿ, ಅವಾಚ್ಯ‌ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ಕುರಿತು ವಿವರಿಸಿದ ಹಲ್ಲೆಗೊಳಗಾದ ನರಸಿಂಹಮೂರ್ತಿ, ಗುರುವಾರ ಕೇಶವ ಎಂಬುವವರು ಇಟ್ಟಿಗೆಗೂಡಿನ ಶೆಡ್ ಬಳಿ ಬರುವಂತೆ ಹೇಳಿದರು. ಅಲ್ಲಿಗೆ ಹೋದ ಮೇಲೆ ಏಕಾಏಕಿ ಕೆನ್ನೆಗೆ ಬಾರಿಸಿ, ಮುಖವನ್ನು ಗೋಡೆಗೆ ಗುದ್ದಿಸಿದರು. ಜಾತಿನಿಂದನೆ ಮಾಡಿ, ಕಾಲಿನಿಂದ ಒದ್ದು ಕೆಳಗೆ ಬೀಳಿಸಿದರು. ಒಂದು ತಾಸಿನ ನಂತರ ಪ್ರಜ್ಞೆ‌ ಬಂದು ಮನೆಗೆ ಹೋದೆ. ಮುಖದ ದವಡೆ ಭಾಗ ಊದಿಕೊಂಡಿದ್ದು, ನಮ್ಮ ಅಕ್ಕನಿಗೆ ಕರೆ ಮಾಡಿ ತಿಳಿಸಿದೆ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ಒಂದು ದಿನ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿದೆ ಎಂದು ಹೇಳಿದರು.

ನರಸಿಂಹಮೂರ್ತಿ ಸೋದರಿ ಮಂಜುಳಾ‌ ಮಾತನಾಡಿ, ಎರಡು ಎಕರೆ ಜಮೀನನ್ನು ಗ್ರಾಮದ ಅಪ್ಪಯ್ಯಣ್ಣ ಅವರಿಗೆ‌ ಮಾರಾಟ ಮಾಡಿದ್ದೆವು. ನೋಂದಣಿ ಮಾಡಿಸುವಾಗ ನಮ್ಮ ಅರಿವಿಗೆ ಬಾರದಂತೆ ಎರಡು ಎಕರೆ ಜೊತೆಗೆ ಮತ್ತೊಂದು ಎಕರೆ ಸೇರಿಸಿ ನೋಂದಣಿ ಮಾಡಿಸಿಕೊಂಡಿದ್ದರು. ಕೆಲ ದಿನಗಳ ಹಿಂದೆ ಜಮೀನಿನ‌ ಹಣ ತೆಗೆದುಕೊಂಡು ಹೋಗುವಂತೆ ಕರೆ‌ ಮಾಡಿ ಹೇಳಿದರು.‌ ಈ ಹಿಂದೆ ಕೊಟ್ಟ ಬೆಲೆಗೆ ಜಮೀನು ಕೊಡಲಾಗದು. ಹೆಚ್ಚಿನ ಬೆಲೆ ಬೇಕು ಎಂದು ಕೇಳಿದ್ದಕ್ಕೆ ಜಾತಿ ಹಿಡಿದು ನಿಂದಿಸಿ, ಬೇಕಾದರೆ ತಗೊಳ್ಳಿ, ಇಲ್ಲವಾದರೆ ಕೋರ್ಟ್ ನಲ್ಲೇ ಹಣ ಕಟ್ಟಿ ನೋಂದಣಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದರು. ಈಗ ಜಮೀನಿಗೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದೆ.

ಈ ಮಧ್ಯೆ ಗುರುವಾರ ಅಪ್ಪಯ್ಯಣ್ಣ ಅವರ ತಂಗಿಯ ಮಗ ಕೇಶವ ಅವರು ನನ್ನ ಸಹೋದರನ ಮೇಲೆ‌ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಕೂಡ ಎರಡು ಬಾರಿ ಹೊಡೆದಿದ್ದರು‌. ಜಮೀನು ಪ್ರಕರಣ ನ್ಯಾಯಾಲಯದಲ್ಲಿದ್ದರೂ ವೃಥಾ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ದಲಿತ ವ್ಯಕ್ತಿಯ ಆರೋಪ ನಿರಾಕರಿಸಿರುವ ಮೇಲ್ವರ್ಗದವರು, ನಾವು ಹೊಡೆದಿಲ್ಲ. ಕುಡಿದು ಮೋರಿಗೆ ಬಿದ್ದು, ನಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.

ತೇಜೋವಧೆ ಮಾಡಿದರೆ ಕಾನೂನು ಕ್ರಮ..!? ಪರಿಶಿಷ್ಟ ಜಾತಿಯ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಶವ ಅವರನ್ನು ಪ್ರಶ್ನಿಸಿದಾಗ, ಯಾವುದೇ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ, ನನ್ನನ್ನು ತೇಜೋವಧೆ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು

ಠಾಣೆಯ ಮುಂದೆ ಪ್ರಭಾವಿ ರಾಜಕಾರಣಿಗಳ ದಂಡು !?ಪ್ರಕರಣ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಆರೋಪಿಯ ಪರವಾಗಿ ತೂಬಗೆರೆ ಹೊಬಳಿಯ ಪ್ರಭಾವಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮುಖಂಡರ ದಂಡೇ ನೆರೆದಿತ್ತು. ಜೊತೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ( ಜೆಡಿಎಸ್ ಪಕ್ಷದಿಂದ ನಾಲ್ಕು ಬಾರಿ ದೊಡ್ಡಬಳ್ಳಾಪುರ ಶಾಸಕ ಸ್ಥಾನದ ಚುನಾವಣೆಗೆ ಸ್ಫರ್ಧೆ ಮಾಡಿದ್ದ ) ಮುನೇಗೌಡ ಕೂಡ ಹಾಜರಿದ್ದು, ರಾಜಿ ಸಂಧಾನಕ್ಕೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಬಡವನ ಕೋಪ‌ ದವಡೆಗೆ ಮೂಲ ಎಂಬಂತೆ ಅಮಾಯಕರನ್ನು ಥಳಿಸಿ, ಪೊಲೀಸ್ ಠಾಣೆಯಲ್ಲಿ ಪ್ರಭಾವ ಬೀರಲು ಹಲವು ರಾಜಕೀಯ ಪಕ್ಷದ ನಾಯಕರು ಬಂದಿದ್ದಾರೆ ಎಂಬುದು ಸಾರ್ವಜನಿಕರ ವಲಯದಲ್ಲಿ  ತೀವ್ರ ಟೀಕೆಗೆ ಗುರಿಯಾಗಿದೆ.

 

LEAVE A REPLY

Please enter your comment!
Please enter your name here