ಮನೆಜಿಲ್ಲೆ ಸುದ್ದಿ*ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ*

*ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ*

*ತಾವರೆಕೆರೆ ರಾಮೇಶ್ವರ–ಸಿದ್ದೇಶ್ವರ ಜಾತ್ರೆಯಲ್ಲಿ ಸಿಎಂ ಹೇಳಿಕೆ*

ಬೆಂಗಳೂರು ಗ್ರಾಮಾಂತರ ಜಿಲ್ಲೆ: ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಶ್ರೀ ರಾಮೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯನು ತನ್ನ ದೈನಂದಿನ ಜೀವನದಲ್ಲಿ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು. ಪೂರ್ವಿಕರು ನೀಡಿದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಸಾಗಿಸುವ ಜವಾಬ್ದಾರಿ ನಮ್ಮದೆ ಎಂದು ಹೇಳಿದರು.

ತಾವರೆಕೆರೆ ರಾಮೇಶ್ವರ ಜಾತ್ರೆಗೆ ತಾವು ಎರಡು ಬಾರಿ ಬಂದಿದ್ದು, ಎರಡೂ ಬಾರಿ ಮುಖ್ಯಮಂತ್ರಿಯಾಗಿಯೇ ಬಂದಿರುವುದು ದೇವರ ಕೃಪೆಯ ಫಲ ಎಂದು ಹೇಳಿದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ಈ ಮಟ್ಟಕ್ಕೆ ಬರಲು ದೇವರ ಆಶೀರ್ವಾದ ಹಾಗೂ ಜನರ ಪ್ರೀತಿ ಕಾರಣವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ವಿವಿಧ ಧರ್ಮದ ಜನರು ಇದ್ದಾರೆ. ಯಾರೂ ಯಾರನ್ನೂ ದ್ವೇಷಿಸಬಾರದು. ಪರಸ್ಪರ ಪ್ರೀತಿ ಮತ್ತು ಸೌಹಾರ್ದದಿಂದ ಬದುಕಬೇಕು. ಪ್ರತಿಯೊಂದು ಜಾತಿ, ಧರ್ಮವನ್ನೂ ನಾನು ಗೌರವಿಸುತ್ತೇನೆ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಮಾತನಾಡಿ, ತಾವರೆಕೆರೆ ರಾಮೇಶ್ವರ ಸ್ವಾಮಿ ನಮ್ಮ ಮನೆ ದೇವರಾಗಿದ್ದು, ಪ್ರತಿ 11 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮ್ಮ ಭಾಗ್ಯದ ಸಂಗತಿ ಎಂದರು. ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.

ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ರಾಮೇಶ್ವರ ಜಾತ್ರೆ ತಾಲ್ಲೂಕಿನ ಎಲ್ಲಾ ಸಮುದಾಯದ ಜನರಿಗೆ ದೊಡ್ಡ ಹಬ್ಬವಾಗಿದೆ. ಜಾತ್ರೆ ನಿಮಿತ್ತ ದೇವಾಲಯದ ರಸ್ತೆಯನ್ನು ₹1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ದೊರೆತಿದ್ದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ, ಎಸ್.ಆರ್. ವಿಶ್ವನಾಥ್, ಮಾಜಿ ಶಾಸಕ ವತೂರು ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

- Advertisment -

Most Popular

Recent Comments