ಸಿನಿಮಾ ರಂಗಕ್ಕೆ ಡಾ. ರಾಜ್ ಕುಮಾರ್ ಅವರ ಕೊಡುಗೆ ಅವಿಸ್ಮರಣೀಯ: ಡಿಸಿ
ಬೆಂ.ಗ್ರಾ.ಜಿಲ್ಲೆ : ವರನಟ ಡಾ. ರಾಜ್ ಕುಮಾರ್ ಅವರ ಕಠಿಣ ಪರಿಶ್ರಮ, ಶಿಸ್ತುಬದ್ದ ಜೀವನ, ಪ್ರತಿಭೆಯು ಎಲ್ಲರಿಗೂ ಮಾದರಿಯಾಗಿದ್ದು, ಸಿನಿಮಾ ರಂಗಕ್ಕೆ ಅವರ ಕೊಡುಗೆ ಅವಿಸ್ಮರಣೀಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವರನಟ ಡಾ. ರಾಜ್ ಕುಮಾರ್ ಅವರ 97 ನೇ ಜನ್ಮದಿನಾಚರಣೆಯಲ್ಲಿ ಡಾ. ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ನಂತರ ಮಾತನಾಡಿ ಚಾಮರಾಜನಗರ ಗ್ರಾಮದಲ್ಲಿ ಜನಿಸಿದ ಅವರು ನಟನೆ ಹಾಗೂ ಹಾಡುಗಾರಿಕೆಯಲ್ಲಿ ಪ್ರತಿಭಾವಂತರಾಗಿದ್ದರು. ನಟನೆ, ಹಾಡುಗಾರಿಕೆಯ ಪ್ರತಿಭೆಯಿಂದ ಚಲನಚಿತ್ರ ರಂಗದಲ್ಲಿ ಇಂದಿಗೂ ಶಾಶ್ವತ ಮೇರು ನಟರಾಗಿದ್ದಾರೆ.
ಚಲನಚಿತ್ರ ರಂಗದಲ್ಲಿ ಡಾ. ರಾಜ್ ಕುಮಾರ್ ಅವರ ಇತರೆ ಭಾಷೆಯ ಸಮಕಾಲೀನ ನಟರೆಲ್ಲರೂ ರಾಜಕೀಯ ರಂಗಕ್ಕೆ ಪ್ರವೇಶಿಸಿದರು. ಇವರು ಮಾತ್ರ ಚಲನಚಿತ್ರ ರಂಗ ಬಿಟ್ಟು ಹೋಗಲಿಲ್ಲ. ಅವರು ಅತ್ಯಂತ ಸರಳ ಜೀವಿ ಹಾಗೂ ಸರಳ ಜೀವನ ನಡೆಸಿದರು.
ರಾಜಕುಮಾರ್ ಅವರು ಸರಳತೆ, ವಿನಯ, ಶಿಸ್ತು ಮತ್ತು ಮನುಷ್ಯತ್ವದ ಸಾಕಾರಮೂರ್ತಿಯಾಗಿದ್ದರು. ಅಭಿಮಾನಿಗಳನ್ನು ‘ದೇವರು’ ಎಂದು ಕರೆದ ಅವರು, ಅಹಂಕಾರವಿಲ್ಲದ, ನಿರ್ಮಾಪಕರನ್ನು ಅನ್ನದಾತ ಎಂದು ಗೌರವಿಸುವ, ಅಪಾರ ಕಲಾಪ್ರೇಮ ಹೊಂದಿದ್ದ ಕನ್ನಡದ ಧ್ರುವತಾರೆ. ನಟನಾಗಿ ಮಾತ್ರವಲ್ಲದೆ ಗಾಯಕರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಸರಳ ಜೀವನಶೈಲಿಯಿಂದ ಕೋಟ್ಯಂತರ ಜನರ ಆರಾಧ್ಯ ದೈವವಾಗಿ ಇಂದಿಗೂ ಅಮರರಾಗಿದ್ದಾರೆ.
ಡಾ. ರಾಜ್ ಕುಮಾರ್ ಅವರ ಬದುಕು ಕೇವಲ ಸಿನಿಮಾಗೆ ಸೀಮಿತವಾಗದೆ, ಒಂದು ಆದರ್ಶ ಜೀವನಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಮೇಶ್ ಅವರು ಮಾತನಾಡಿ, ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ದೈನಂದಿನ ಜೀವನಕ್ಕೆ ಅಳವಡಿಸಿಕೊಂಡು ಲಕ್ಷಾಂತರ ಜನರು ಸುಸಜ್ಜಿತವಾದ ಜೀವನವನ್ನು ನಡೆಸುತ್ತಿದ್ದಾರೆ. ಡಾ. ರಾಜ್ ಅವರಿಗೆ ರಾಜಕೀಯ ಪ್ರವೇಶಿಸಲು ಸಾಕಷ್ಟು ಅವಕಾಶವಿದ್ದರು, ಚಿತ್ರರಂಗ ಬಿಟ್ಟು ಹೋಗದೇ ಕಲಾ ಸೇವೆಯಲ್ಲಿಯೇ ಉಳಿದ ಮೇರು ನಟರು. ಇವರ ಅಭಿನಯಕ್ಕೆ ಎಲ್ಲಾ ಸಮುದಾಯದ ಅಭಿಮಾನಿಗಳು ಇದ್ದರು. ಕನ್ನಡ ಚಿತ್ರರಂಗಕ್ಕೆ ವರನಟ ಡಾ. ರಾಜ್ ಕುಮಾರ್ ವಿಶ್ವಕೋಶ ಇದ್ದಂತೆ. ಅದ್ಭುತ ಅಭಿನಯದ ಜತೆಗೆ ಪಾತ್ರಗಳಿಗೆ ಜೀವ ತುಂಬುವ ನಟರಾಗಿದ್ದರು. ಅವರ ಸಿನಿಮಾಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರುತ್ತೆ. ಅವರ ಬಂಗಾರದ ಮನುಷ್ಯ ಸಿನಿಮಾದಿಂದ ಪ್ರೇರಣೆಗೊಂಡು ಅದೇಷ್ಟೋ ಜನರು ಕೃಷಿ ಕೆಲಸದತ್ತ ಮುಖ ಮಾಡಿದ್ದರು. ಆಗ ಕೃಷಿ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಿತು.
ಕನ್ನಡ ಚಿತ್ರರಂಗದಲ್ಲಿ ಅವರನ್ನ ಮೀರಿಸುವ ನಟ ಯಾರು ಇಲ್ಲ. ನಾವು ಅವರ ಸರಳ ಜೀವನ ಮತ್ತು ಮಾರ್ಗದರ್ಶನವನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಗೀತಗಾಯನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದ ಅಯಿಷಾ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಯೋಜನಾಧಿಕಾರಿ ರಾಮಕೃಷ್ಣಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್ ಡಿ, ಡಿವೈಎಸ್ಪಿ ಪಾಂಡುರಂಗ, ಕೃಷಿ ಜಂಟಿ ನಿರ್ದೇಶಕಿ ಕಲಾವತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.







