ಗ್ರಾಮ ಪಂಚಾಯತಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರು ಚಲೋ ಎಚ್ಚರಿಕೆ
ದೊಡ್ಡಬಳ್ಳಾಪುರ : ಗ್ರಾಮ ಪಂಚಾಯತ ನೌಕರರ ಬೇಡಿಕೆಗಳನ್ನು ಇತ್ಯರ್ಥಪಡಿಸದೆ ಹೋದರೆ ಬೃಹತ್ ಬೆಂಗಳೂರು ಚಲೋ ಹಮ್ಮಿ ಕೊಳ್ಳಲಾಗುವುದು ಎಂದು ಸಿಐಟಿಯ ರಾಜ್ಯ ಉಪಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರ ಸಿಐಟಿಯು ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪಂಚಾಯತಿ ನೌಕರರ ಸಂಘದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ ನೌಕರರ ಬೇಡಿಕೆಗಳಿಗಾಗಿ ಒತ್ತಾಯಿಸಿ ಕಳೆದ ಡಿಸೆಂಬರ್ 20, 2025 ರಿಂದ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಗ್ರಾಮ ಪಂಚಾಯತ ನೌಕರರು ಸರ್ಕಾರದ ಗಮನವನ್ನು ಸೆಳೆದಿದ್ದರು.
ದಿನಾಂಕ 21-12-2025 ರಂದು ಸರ್ಕಾರದ ಕಾರ್ಯದರ್ಶಿಗಳು ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಬಂದು ಪಂಚಾಯತ ನೌಕರರ ಬೇಡಿಕೆಗಳ ಕುರಿತು ಮಾತನಾಡಿ ದಿನಾಂಕ 22-12-2025 ರಂದು ಸಂಘಟನೆಯ ಮುಖಂಡರನ್ನು ಸಭೆ ಕರೆದು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಒಂದೊಂದೆ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದೀರು. ಇದರಲ್ಲಿ ಸರ್ಕಾರದ ಹಂತದಲ್ಲಿರುವ (ಪಾಲಿಸಿ ಮ್ಯಾಟರ್) ಬೇಡಿಕೆಗಳನ್ನು ಸಚಿವರ ಜೊತೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು, ಉಳಿದ ನಮ್ಮ ಹಂತದಲ್ಲಿರುವ ಪ್ರಮುಖ ಬೇಡಿಕೆಗಳನ್ನು ಕೂಡಲೆ ಇತ್ಯರ್ಥಪಡಿಸಿ ಆದೇಶವನ್ನು ನೀಡಲಾಗುವುದೆಂದು ಭರವಸೆಯನ್ನು ಕೊಟ್ಟಿದ್ದರಿಂದ ಆ ಭರವಸೆ ಮೇರೆಗೆ ನಮ್ಮ ಧರಣಿ ಕಾರ್ಯಕ್ರಮವನ್ನು ವಾಪಸ್ ಪಡೆದುಕೊಂಡಿದ್ದೆವು.
ಆದರೆ, ತಾವು ಭರವಸೆ ಕೊಟ್ಟು 3 ತಿಂಗಳು ಕಳೆದಿದ್ದು, ಈ 3 ತಿಂಗಳಲ್ಲಿ 2-3 ಬಾರಿ ಮಾತುಕತೆ ನಡೆಸಿದ್ದರೂ 19 ಬೇಡಿಕೆಗಳಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಪ್ರಮುಖವಾಗಿರುವ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ನೀಡಿದ್ದರು. ಅವರು ನೀಡಿದ್ದ ಭರವಸೆಯಲ್ಲಿ ಇಲ್ಲಿವರೆಗೆ ಒಂದೇ ಒಂದು ಬೇಡಿಕೆ ಈಡೇರಿಸದೇ ಇರುವುದು ವಿಷಾದನೀಯ ಎಂದರು.

ಈ ಕಾರಣದಿಂದ ಇಡೀ ರಾಜ್ಯದ ಪಂಚಾಯತ ನೌಕರರು ಅಸಮಾಧಾನಗೊಂಡು ಇಲಾಖೆಯ ವಿಳಂಬ ನೀತಿಯನ್ನು ಪ್ರತಿಭಟಿಸಿ ದಿನಾಂಕ 16-04-2026 ರಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ ಕಚೇರಿಗಳ ಮುಂದೆ ಹೋರಾಟ ನಡೆಸಿ ಭರವಸೆಗಳ ಈಡೇರಿಸಲು ಒತ್ತಾಯಿಸುತ್ತಿದ್ದೇವೆ. ಈ ಮನವಿಗೂ ಸರ್ಕಾರ ಸ್ಪಂದಿಸದಿದ್ದರೆ ಮುಂದೆ ನಮ್ಮ ಹೋರಾಟ ಬೃಹತ್ ಪ್ರಮಾಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಈ ಹೋರಾಟದಲ್ಲಿ ಏನಾದರೂ ಅನಾಹುತಗಳಾದರೆ ಇದಕ್ಕೆ ನೇರವಾಗಿ ಆಡಿಪಿಆರ್ ಇಲಾಖೆಯೆ ಹೊಣೆಯಾಗುತ್ತದೆ. ಆದ್ದರಿಂದ ಯಾವುದೇ ಅನಾಹುತಗಳಿಗೆ ಆಸ್ಪದ ನೀಡದೇ ಕೂಡಲೆ ತಾವೇ ಒಪ್ಪಿಕೊಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.ಬೇಡಿಕೆಗಳು:-
1. ತಾವೇ ಒಪ್ಪಿಕೊಂಡಿರುವ ಪ್ರಕಾರ ರೂ.5000 ಎಲ್ಲ ನೌಕರರಿಗೆ ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು.
2. ನೌಕರರು ನಿವೃತ್ತಿ/ನಿಧನ ಹೊಂದಿದರೆ ಅವರಿಗೆ ಇಡಗಂಟು ರೂ.6 ಲಕ್ಷ ನೀಡಬೇಕು.
3. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು.
4. ತಾವು ಭರವಸೆ ನೀಡಿದ ಭಾಗವಾಗಿ ಸ್ವಚ್ಛವಾಹಿನಿ ನೌಕರರ ಸಭೆಯನ್ನು ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು.
5. ಪ್ರತಿಯೊಂದು ಪಂಚಾಯತಿಗೆ ದ್ವಿತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು
6. ಕಳೆದ 18-20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು.
7. 2ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು.
8. ಈಗಾಗಲೆ ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ಫಾರ್ಮೆಟ್ ಕಳಿಸಿದ್ದೀರಿ. ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ, ಕಾರ್ಮಿಕರ ಮಾಹಿತಿ ನೀಡಲು ತಿಳಿಸಿದ್ದೀರಿ. ಆದರೆ ಈ ಫಾರ್ಮೆಟ್ನಲ್ಲಿ ಪಂಚಾಯತ ನೌಕರರೆಂದು ಮಾಹಿತಿ ಇಲ್ಲಾ ಇದನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಗ್ರಾಮ ಪಂಚಾಯತಿ ನೌಕರರ ಸಂಘದ ರಾಜ್ಯ ಮುಖಂಡ ಶ್ರೀನಿವಾಸ್, ಜಿಲ್ಲಾಧ್ಯಕ್ಷ ಟಿ.ಎಂ.ನಟರಾಜು ಉಪಸ್ಥಿತರಿದ್ದರು.







